ಒಂದೇ ವಾರಕ್ಕೆ ಸಂತೋಷ್ ಚಿತ್ರಮಂದಿರದಿಂದ ಉದ್ಘರ್ಷವನ್ನು ಎತ್ತಂಗಡಿ ಮಾಡಲಾಗಿದೆ. ಆದರೆ, 14 ಕೋಟಿ ರೂ. ವೆಚ್ಚ ಮಾಡಿದ ನಾಲ್ಕು ಭಾಷೆಗಳಲ್ಲಿ ತಯಾರಿಸಿದ ನಿರ್ಮಾಪಕ ದೇವರಾಜ್ ಆರ್, ಅವರಿಗೆ ಹಾಕಿದ ಹಣ ವಾಪಸ್ ಬರುವುದು ಖಾತ್ರಿ ಇದೆಯಂತೆ.
ಕನ್ನಡ ‘ಉದ್ಘರ್ಷ’ ಚಿತ್ರವನ್ನೂ ತೆಲುಗು ಭಾಷೆಯ ಜೊತೆಗೆ ಮರು ಬಿಡುಗಡೆ ಮಾಡಲು ಸಿದ್ಧವಾಗಿದ್ದಾರೆ ನಿರ್ಮಾಪಕ ದೇವರಾಜ್. ಎಪ್ರಿಲ್ ನಂತರ ತೆಲುಗು ಆವತರಣೆಯ ಚಿತ್ರ ಬಿಡುಗಡೆಯಾಗಲಿದೆ. ಇದರ ಜೊತೆಗೆ ಸ್ವಲ್ಪ ಎಡಿಟ್ ಮಾಡಿದ ಕನ್ನಡ ಭಾಷೆಯ ಚಿತ್ರವನ್ನೂ ಬಿಡುಗಡೆ ಮಾಡಲಾಗುವುದು. ತೆಲುಗು ಆವತರಣೆಕೆಗೆ ಅಲ್ಲಿಯ ಸೆನ್ಸಾರ್ ಮಂಡಳಿಯಿಂದ ಸರ್ಟಿಫಿಕೇಟ್ ಸಿಗುವುದು ಸ್ವಲ್ಪ ತಡವಾಗಿತ್ತು. ಈ ಕಾರಣ ಮುಂದಿನ ತಿಂಗಳು ಈ ಚಿತ್ರ ಬಿಡುಗಡೆಯಾಗಲಿದೆಯಂತೆ.
ಡಿಜಿಟಲ್ ಮತ್ತು ಟಿವಿ ರೈಟ್ ವಿಚಾರಕ್ಕೆ ಸಂಬಂಧಿಸಿದಂತೆ ದೇವರಾಜ್ ದೊಡ್ಡ ಮೊತ್ತ ನಿರೀಕ್ಷಿಸುತ್ತಿದ್ದಾರೆ. ಈ ಹಣ ಚಿತ್ರದ ಬಹುತೇಕ ವೆಚ್ಚವನ್ನು ಕವರ್ ಮಾಡುವುದಾಗಿ ಅವರು ನಂಬಿದ್ದಾರೆ.
ಇನ್ನು ಚಿತ್ರ ಸೋತಿದ್ದಕ್ಕೆ ಸುನಿಲ್ ಕುಮಾರ್ ದೇಸಾಯಿ ಅವರಿಗೆ ನಿರ್ಮಾಪಕರೇ ಧೈರ್ಯ ಹೇಳಿದ್ದಾರೆ. ಇಷ್ಟೊಂದು ಕಷ್ಟಪಟ್ಟು ಮಾಡಿರುವ ಸಿನಿಮಾ. ಜನರು ಈ ಕ್ಷಣದಲ್ಲಿ ಸ್ವೀಕಾರ ಮಾಡದಿರಬಹುದು. ಅದನ್ನು ಮುಂದೆ ಒಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆ ನಿರ್ಮಾಪಕ ದೇವರಾಜ್ ಅವರದು.
ಕನ್ನಡದ ಚಿತ್ರಕ್ಕೆ ‘ಎ’ ಅರ್ಹತಾ ಪತ್ರ ಸಿಕ್ಕಿದ್ದರಿಂದ ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್ಗಳಲ್ಲಿ ಸ್ವಲ್ಪ ತೊಂದರೆಯಾಗಿರುವುದನ್ನು ನಿರ್ಮಾಪಕರು ಒಪ್ಪಿಕೊಳ್ಳುತ್ತಾರೆ.