ಖಾಸಗಿ ವಾಹಿನಿಯ ವೀಕ್ಷಕರಿಗೆ ಈ ವಾರಾಂತ್ಯದಲ್ಲಿ ಮನರಂಜನೆಯ ಮಹಾಪೂರವನ್ನೇ ಉಣಬಡಿಸುವುದಕ್ಕಾಗಿ ಎರಡು ಹೊಸ ಕಾರ್ಯಕ್ರಮಗಳ ಪ್ರಸಾರ ಆರಂಭಿಸಲಾಗುತ್ತಿದೆ.
ಲಾಕ್ಡೌನ್ ಡೈರೀಸ್ ಎಂಬ ಶೀರ್ಷಿಕೆಯಡಿಯಲ್ಲಿ ಕಾರ್ಯಕ್ರಮ ಆರಂಭವಾಗಲಿದ್ದು, ಲಾಕ್ಡೌನ್ ಸಮಯವನ್ನು ಸೆಲೆಬ್ರಿಟಿಗಳು ಹೇಗೆ ಕಳೆಯಲಿದ್ದಾರೆ ಎಂಬುದನ್ನು ವೀಕ್ಷಕರಿಗೆ ಜೀ ವಾಹಿನಿ ತೋರಿಸಲಿದೆ.
ಎಲ್ಲಾ ಕಲಾವಿದರು ತಮ್ಮ ತಮ್ಮ ಮನೆಯಿಂದಲೇ ವಿಡಿಯೋ ಮಾಡಿರುವುದು ಲಾಕ್ಡೌನ್ ಡೈರೀಸ್ ವಿಶೇಷ. ಲಾಕ್ಡೌನ್ ಡೈರೀಸ್ ಜೊತೆಗೆ ಆರಂಭವಾಗಲಿರುವ ಮಗದೊಂದು ಕಾರ್ಯಕ್ರಮ ಕಾಫಿ ವಿತ್ ಅನುಶ್ರೀ. ಅನುಶ್ರೀ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಈ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳು ಭಾಗವಹಿಸಿ ತಮ್ಮ ಮನದಾಳದ ಮಾತುಗಳನ್ನಾಡಲಿದ್ದಾರೆ.
ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9.30ಕ್ಕೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್, ರಕ್ಷಿತ್ ಶೆಟ್ಟಿ, ರಚಿತಾ ರಾಮ್ ಸೇರಿದಂತೆ ಒಂದಿಷ್ಟು ಜನ ಕಲಾವಿದರು ಬಿಸಿ ಬಿಸಿ ಕಾಫಿ ಕುಡಿಯುತ್ತಾ ಅನುಶ್ರೀ ಜೊತೆ ಚಿಟ್ ಚಾಟ್ ಮಾಡಲಿದ್ದಾರೆ. ಈ ವಾರದ ಮೊದಲ ಅತಿಥಿಯಾಗಿ ಕನ್ನಡದ ಹೆಸರಾಂತ ನಟ, ವೀಕೆಂಡ್ ವಿತ್ ರಮೇಶ್ ಶೋ ಸಾರಥಿ ರಮೇಶ್ ಅರವಿಂದ್ ಭಾಗವಹಿಸಲಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಮಾಲ್ಗುಡಿ ಡೇಸ್ ಧಾರಾವಾಹಿಯ ಕನ್ನಡ ಅವತರಣಿಕೆ ಪ್ರಸಾರ ಮಾಡಿ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದ ಜೀ ಕನ್ನಡ ಈ ವಾರಾಂತ್ಯದಲ್ಲಿ ಮತ್ತೆರಡು ಹೊಸ ಕಾರ್ಯಕ್ರಮದ ಮೂಲಕ ವೀಕ್ಷಕರ ಮನ ಸೆಳೆಯಲು ಸಜ್ಜಾಗಿದೆ.