ನಿಷ್ಕರ್ಷ
1993 ರಲ್ಲಿ ಸುಮಾರು 55 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆದ ಡಾ. ವಿಷ್ಣುವರ್ಧನ್ ಅಭಿನಯದ ‘ನಿಷ್ಕರ್ಷ’ ಇಂದು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಇನ್ನಷ್ಟು ತಾಂತ್ರಿಕ ಸೌಲಭ್ಯ ಒದಗಿಸಿಕೊಂಡು ಪ್ರೇಕ್ಷಕರ ಮುಂದೆ ಬರುತ್ತಿದೆ. ಈ ಸಿನಿಮಾವನ್ನು ಮೊದಲು ಡಿಜಿಟಲ್ ಆಗಿ ಪರಿವರ್ತಿಸಿ ಇದರೊಂದಿಗೆ ಹೊಸ ಆಡಿಯೋ ಕೂಡಾ ಅಳವಡಿಸಲಾಗಿದೆ. 25 ವರ್ಷಗಳ ಹಿಂದೆ ಭರ್ಜರಿ ಯಶಸ್ಸು ಕಂಡು ರಾಜ್ಯ ಪ್ರಶಸ್ತಿ ಕೂಡಾ ಪಡೆದ ಈ ಚಿತ್ರವನ್ನು ಸುನಿಲ್ ಕುಮಾರ್ ದೇಸಾಯಿ ನಿರ್ದೇಶಿಸಿದ್ದರೆ ಬಿ.ಸಿ. ಪಾಟೀಲ್ ನಿರ್ಮಾಣ ಮಾಡಿದ್ದರು. ಇದೀಗ ಸೃಷ್ಟಿ ಫಿಲಮ್ಸ್ ಬ್ಯಾನರ್ ಅಡಿ ಸಿನಿಮಾ ಮರು ಬಿಡುಗಡೆ ಆಗುತ್ತಿದೆ.
ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಅವರ ವೃತ್ತಿ ಜೀವನದಲ್ಲಿ ದೊಡ್ಡ ಮೈಲಿಗಲ್ಲಾದ ಸಿನಿಮಾ ಇದು. ಡಾ. ವಿಷ್ಣುವರ್ಧನ್ ಜೊತೆಗೆ ಅನಂತ್ನಾಗ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಉಳಿದಂತೆ ಸುಮನ್ ನಗರ್ಕರ್, ರಮೇಶ್ ಭಟ್, ಪ್ರಕಾಶ್ ರಾಜ್, ಗುರುಕಿರಣ್ ಹಾಗೂ ಇತರರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ನಿನ್ನೆ ಸಾಹಸಸಿಂಹ ವಿಷ್ಣುವರ್ಧನ್ ಅವರ ಹುಟ್ಟುಹಬ್ಬವಾಗಿದ್ದು ಬರ್ತಡೇ ಗಿಫ್ಟ್ ಆಗಿ ಬಿ.ಸಿ.ಪಾಟೀಲ್ ಸಿನಿಮಾವನ್ನು ಮರುಬಿಡುಗಡೆ ಮಾಡುತ್ತಿದ್ದಾರೆ. ಚಿತ್ರಕ್ಕೆ ಗುಣಸಿಂಗ್ ಹಿನ್ನೆಲೆ ಸಂಗೀತ ನೀಡಿದ್ದರೆ ಪಿ. ರಾಜನ್ ಛಾಯಾಗ್ರಹಣ ಇದೆ. ಜಯಣ್ಣ ಫಿಲಮ್ಸ್ ಈ ಚಿತ್ರವನ್ನ ರಾಜ್ಯಾದ್ಯಂತ ವಿತರಣೆ ಮಾಡುತ್ತಿದೆ.
ತ್ರಿಪುರ
ಅಶ್ವಿನಿ ಗೌಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 'ತ್ರಿಪುರ' ಸಿನಿಮಾ ನಾಳೆ ಬಿಡುಗಡೆಯಾಗುತ್ತಿದೆ. ಶ್ರೀ ಅಂಕುರ್ ಕ್ರಿಯೇಷನ್ಸ್ ಅಡಿಯಲ್ಲಿ ಎಲ್.ಮಂಜುನಾಥ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಕುತೂಹಲಕಾರಿ ಕಥಾವಸ್ತು ಜೊತೆಗೆ, ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಪ್ರೇಮಕಥೆ ಕೂಡಾ ಸಿನಿಮಾದಲ್ಲಿ ಇರಲಿದೆ. ಕೆ. ಶಂಕರ್ ಈ ಸಿನಿಮಾಗೆ ಚಿತ್ರಕಥೆ, ಸಂಭಾಷಣೆ, ಗೀತೆಗಳನ್ನು ರಚಿಸಿ ನಿರ್ದೇಶನ ಕೂಡಾ ಮಾಡಿದ್ದಾರೆ. ಚಿತ್ರಕ್ಕೆ ಹೇಮಂತ್ ಕುಮಾರ್ ಸಂಗೀತ, ಗೌರಿ ವೆಂಕಟೇಶ್ ಛಾಯಾಗ್ರಹಣ, ಹರಿಕೃಷ್ಣ ನೃತ್ಯ, ರಾಜಶೇಖರ್ ರೆಡ್ಡಿ ಸಂಕಲನ ಮಾಡಿದ್ದಾರೆ. ಅಶ್ವಿನಿ ಗೌಡ ಜೊತೆಗೆ ಶ್ರೀಧರ್, ಧರ್ಮ, ಟೆನ್ನಿಸ್ ಕೃಷ್ಣ, ಲಕ್ಷ್ಮಣ್ ರಾವ್, ಕಿಲ್ಲರ್ ವೆಂಕಟೇಶ್, ರಮಾನಂದ್, ಸುಂದರಶ್ರೀ, ಡಿಂಗ್ರಿ ನಾಗರಾಜ್, ಬೇಬಿ ಆದ್ಯ, ಪವಿತ್ರ ಹಾಗೂ ಇತರರು ತಾರಾಗಣದಲ್ಲಿದ್ದಾರೆ.