ಹುಬ್ಬಳ್ಳಿ: ಬೆಂಗಳೂರು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ಜೊತೆ ಸಂಪರ್ಕ ಹೊಂದಿದ್ದರೆನ್ನಲಾದ ಧಾರವಾಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯನ್ನು ವಿಚಾರಣೆ ನಡೆಸಲಾಗುತ್ತಿದೆ.
ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ ಜೊತೆಗಿನ ನಂಟು ಹುಬ್ಬಳ್ಳಿಗೂ ವಿಸ್ತರಿಸಿದಂತಾಗಿದ್ದು, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್ ಗದಿಗೆಪ್ಪಗೌಡ ಅವರನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ನಟಿ ರಾಗಿಣಿ ಜೊತೆಗೆ ಈ ರಾಜಕಾರಣಿ ಸಂಪರ್ಕ ಹೊಂದಿದ್ದರು. ರಾಗಿಣಿ ಮೊಬೈಲ್‌ನಲ್ಲಿ ಗಿರೀಶ್ ಭಾವಚಿತ್ರ ಸಿಕ್ಕಿದೆ ಎನ್ನಲಾಗ್ತಿದೆ. ಹಾಗೆಯೇ ಗಿರೀಶ್ ಅವರು ನಟಿಯ ಜೊತೆಗೆ ಗೋವಾಕ್ಕೆ ತೆರಳಿದ್ದರೆನ್ನಲಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಈಗ ಬಹಿರಂಗವಾಗಿವೆ.
ಈ ಬಗ್ಗೆ ಸಿಸಿಬಿ ಪೊಲೀಸರು ಗಿರೀಶ್ ಗದಿಗೆಪ್ಪಗೌಡ ಅವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಲ್ಲದೆ, ಹುಬ್ಬಳ್ಳಿಯ ಉಣಕಲ್‌ನಲ್ಲಿರುವ ಮನೆಯಲ್ಲೂ ತಪಾಸಣೆ ನಡೆಸಿದ್ದಾರೆ.