ತೋತಾಪುರಿ ಕನ್ನಡ ಚಿತ್ರರಂಗದಲ್ಲಿ ಶೀರ್ಷಿಕೆಯಿಂದಲೇ ಸಖತ್ ಸೌಂಡ್ ಮಾಡುತ್ತಿರುವ ಸಿನಿಮಾ. ನವರಸ ನಾಯಕ ಜಗ್ಗೇಶ್ 'ಎದ್ದೇಳು ಮಂಜುನಾಥ' ಪಾತ್ರದ ಬಳಿಕ ಪಕ್ಕಾ ಹಳ್ಳಿ ಹೈದನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸತೀಶ್ ನಿನಾಸಂ ಮತ್ತು ಹರಿಪ್ರಿಯಾ ಅಭಿನಯದ ಪೆಟ್ರೋಮ್ಯಾಕ್ಸ್ ಚಿತ್ರೀಕರಣ ಮುಗಿಸಿದ ಬಳಿಕ ನಿರ್ದೇಶಕ ವಿಜಯ ಪ್ರಸಾದ್, ತೋತಾಪುರಿ ಸಿನಿಮಾ ಶೂಟಿಂಗ್ ಸ್ಟಾರ್ಟ್ ಮಾಡಿದ್ದಾರೆ.
'ನೀರ್ ದೋಸೆ' ಬಳಿಕ ಜಗ್ಗೇಶ್ ಮತ್ತು ವಿಜಯ್ ಪ್ರಸಾದ್ ಕಾಂಬಿನೇಷನ್ನಲ್ಲಿ ಬರ್ತಾ ಇರೋ ಬಹುನಿರೀಕ್ಷಿತ ಚಿತ್ರ ತೋತಾಪುರಿ. ಸದ್ಯ ಮೈಸೂರಿನಲ್ಲಿ ತೋತಾಪುರಿ ಸಿನಿಮಾ ಚಿತ್ರೀಕರಣ ಆರಂಭ ಆಗಿದ್ದು, ಜಗ್ಗೇಶ್, ನಟಿ ಅಧಿತಿ ಪ್ರಭುದೇವ, ವೀಣಾ ಸುಂದರ್ ನಡುವಿನ ಸನ್ನಿವೇಶವನ್ನು ನಿರ್ದೇಶಕ ವಿಜಯ್ ಪ್ರಸಾದ್ ಚಿತ್ರೀಕರಿಸುತ್ತಿದ್ದಾರೆ.
ಅದಿತಿ ಪ್ರಭುದೇವ ಮುಸ್ಲಿಂ ಯುವತಿ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಜಗ್ಗೇಶ್ ಹಳ್ಳಿ ರೈತನ ಪಾತ್ರದಲ್ಲಿ ಆ್ಯಕ್ಟ್ ಮಾಡುತ್ತಿದ್ದಾರೆ. 'ಗೋವಿಂದಾಯ ನಮಃ' ಹಾಗೂ 'ಶಿವಲಿಂಗ'ದಂತಹ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ನಿರ್ಮಾಪಕ ಕೆ.ಎ.ಸುರೇಶ್ ಹೇಳುವ ಪ್ರಕಾರ ಕೊರೊನಾದಿಂದಾಗಿ ಸಿನಿಮಾ ಶೂಟಿಂಗ್ ಮಾಡೋದಿಕ್ಕೆ ಆಗಿರಲಿಲ್ಲ. ತೋತಾಪುರಿ ಸಿನಿಮಾವನ್ನು ಬಹು ಬೇಗನೆ ಚಿತ್ರೀಕರಣ ಮಾಡಿ ದಸರಾ ಹೊತ್ತಿಗೆ ಬಿಡುಗಡೆ ಮಾಡುವ ಪ್ಲಾನ್ನಲ್ಲಿದ್ದೇವೆ ಎಂದಿದ್ದಾರೆ.
ಇನ್ನು ಚಿತ್ರದಲ್ಲಿ ಡಾಲಿ ಧನಂಜಯ್ ಕೂಡ ವಿಭಿನ್ನ ಕ್ಯಾರೆಕ್ಟರ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸುಮನ್ ರಂಗನಾಥ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಿರ್ದೇಶಕ ವಿಜಯ್ ಪ್ರಸಾದ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ಅನೂಪ್ ಸೀಳೀನ್ ಸಂಗೀತ ಸಂಯೋಜಿಸಿದ್ದಾರೆ.