ವಾಷಿಂಗ್ಟನ್: ಹಾಲಿವುಡ್ ಹಿರಿಯ ನಟ ಟಾಮ್ ಹ್ಯಾಂಕ್ಸ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಸಾಹಸಮಯ ವೈಜ್ಞಾನಿಕ ಸಿನಿಮಾ 'ಬಯೋಸ್' ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿದೆ. ಇದೇ ವರ್ಷ ಅಕ್ಟೋಬರ್ 2 ರಂದು ಸಿನಿಮಾ ಬಿಡುಗಡೆ ಆಗಲಿದೆ ಎಂದು ಈ ಮೊದಲು ಹೇಳಲಾಗಿತ್ತು. ಆದರೆ ಮುಂದಿನ ವರ್ಷ ಸಿನಿಮಾ ಬಿಡುಗಡೆಯಾಗುತ್ತಿದೆ.
ಮುಂದಿನ ವರ್ಷ ಏಪ್ರಿಲ್ 16 ರಂದು ಈ ಸಿನಿಮಾ ಬಿಡುಗಡೆಗೆ ಅಂತಿಮ ದಿನಾಂಕವನ್ನು ಚಿತ್ರತಂಡ ನಿಗದಿಪಡಿಸಿದೆ. ಭೂಮಿಯ ಮೇಲೆ ಉಳಿಯುವ ಕೊನೆಯ ವ್ಯಕ್ತಿ ತಾನೂ ಕೂಡಾ ಸಾವಿನ ದವಡೆಯಲ್ಲಿರುವ ಸಂದರ್ಭದಲ್ಲಿ ಆತನಿಗೆ ತಾನು ಪ್ರೀತಿಯಿಂದ ಸಾಕಿರುವ ನಾಯಿಯ ಬಗ್ಗೆ ಚಿಂತೆ ಕಾಡತೊಡಗುತ್ತದೆ. ನಾನು ಸತ್ತಾಗ ತನ್ನ ಮುದ್ದಿನ ನಾಯಿಯನ್ನು ನೋಡಿಕೊಳ್ಳುವವರು ಯಾರು ಎಂದು ಯೋಚಿಸಿ ಕೊನೆಗೆ ನಾಯಿಯನ್ನು ನೋಡಿಕೊಳ್ಳಲು ಒಂದು ರೋಬೋಟ್ ನಿರ್ಮಿಸುತ್ತಾನೆ. ಮುಂದೆ ಏನು ನಡೆಯುತ್ತದೆ ಎಂಬುದನ್ನು ತಿಳಿಯಲು ನೀವು ಮುಂದಿನ ವರ್ಷದವರೆಗೂ ಕಾಯಬೇಕು. ಟಾಮ್ ಹ್ಯಾಂಕ್ಸ್ ಭೂಮಿಯಲ್ಲಿ ಉಳಿಯುವ ಕೊನೆಯ ವ್ಯಕ್ತಿಯಾಗಿ ನಟಿಸಿದ್ದಾರೆ.
ಚಿತ್ರ ಬಹಳ ಕುತೂಹಲಕಾರಿಯಾಗಿದ್ದು ಮಿಗುಯೆಲ್ ಸಪೋಚ್ನಿಕ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಯೂನಿವರ್ಸಲ್ ಪಿಕ್ಚರ್ಸ್ ಈ ಚಿತ್ರವನ್ನು ಹಂಚಿಕೆ ಮಾಡುತ್ತಿದೆ. ಚಿತ್ರದಲ್ಲಿ ಟಾಮ್ ಹ್ಯಾಂಕ್ಸ್ ಜೊತೆ ಕ್ಯಾಲೆಬ್ ಲ್ಯಾಂಡ್ರಿಜೋನ್ಸ್, ಸಮಿರಾ ವಿಲೆ, ಲಾರಾ ಹ್ಯಾರಿಯರ್, ಸ್ಕೀಟ್ ಉಲ್ರಿಚ್ ಹಾಗೂ ಇನ್ನಿತರರು ನಟಿಸಿದ್ದಾರೆ. ಈ ನಡುವೆ ಟಾಮ್ ಹ್ಯಾಂಕ್ಸ್ ನಟನೆಯ ಮತ್ತೊಂದು ಬಹುನಿರೀಕ್ಷಿತ ಚಿತ್ರ 'ಗ್ರೇಹೌಂಡ್' ಇದೇ ವರ್ಷ ಜುಲೈ 10 ರಂದು ಬಿಡುಗಡೆಯಾಗುತ್ತಿದೆ.