ಗಂಗಾವತಿ: ಡಾ. ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' ರಾಜ್ಯಾದ್ಯಂತ ಬಿಡುಗಡೆಯಾಗಿ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಮೊದಲ ಬಾರಿಗೆ ಪುನೀತ್ ಜೊತೆ ನಟಿಸಿ 'ಜೇಮ್ಸ್' ಸಿನಿಮಾದಲ್ಲಿ ಖಳನಾಯಕನಾಗಿ ಮಿಂಚಿರುವ ಟಾಲಿವುಡ್ ಸ್ಟಾರ್ ಶ್ರೀಕಾಂತ್, ಅಪ್ಪು ಅಗಲಿಯ ನೋವಿನಿಂದಾಗಿ ತಮ್ಮ ಜನ್ಮ ದಿನಾಚರಣೆಯನ್ನು ನಗರದಲ್ಲಿ ಕೆಲವೇ ಅಭಿಮಾನಿಗಳ ಸಮ್ಮುಖದಲ್ಲಿ ಸರಳವಾಗಿ ಆಚರಿಸಿಕೊಂಡರು.
ಟಾಲಿವುಡ್ನಲ್ಲಿ ಕಳೆದ ಎರಡು ದಶಕಕ್ಕೂ ಹೆಚ್ಚು ಕಾಲದಿಂದ ನಟನೆ ಮೂಲಕ ತಮ್ಮದೆ ಛಾಪು ಮೂಡಿಸಿರುವ ನಟ ಶ್ರೀಕಾಂತ್, ಪ್ರತಿ ವರ್ಷ ತಮ್ಮ ಹುಟ್ಟುಹಬ್ಬವನ್ನ ಸ್ನೇಹಿತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಆಚರಿಸುತ್ತಿದ್ದರು. 'ಜೇಮ್ಸ್' ಚಿತ್ರದಲ್ಲಿ ಮೊದಲ ಬಾರಿಗೆ ಅಪ್ಪು ಜೊತೆ ನಟನೆ ಮಾಡಿದ್ದ ಶ್ರೀಕಾಂತ್, ಪುನೀತ್ ಸಾವಿನ ಹಿನ್ನೆಲೆ ಈ ಬಾರಿಯ ಅದ್ಧೂರಿ ಬರ್ತ್ಡೇ ಆಚರಣೆಗೆ ಬ್ರೇಕ್ ಹಾಕಿ, ಮಂಗಳವಾರ ಗಂಗಾವತಿ ಶಿವೆ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ಕೆಲಕಾಲ ಕಳೆದರು. ಇಂದು ತಮ್ಮ ಆಯ್ದ ಅಭಿಮಾನಿಗಳೊಂದಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡರು.
ಮೂಲತಃ ಗಂಗಾವತಿ ತಾಲೂಕಿನ ಬಸವಪಟ್ಟಣ ಗ್ರಾಮದವರಾದ ಶ್ರೀಕಾಂತ್, ನಟನಾಗಬೇಕು ಎಂಬ ಉದ್ದೇಶದಿಂದ ಹೈದರಾಬಾದ್ಗೆ ಕಳೆದ ಎರಡು ದಶಕದ ಹಿಂದೆಯೇ ಬಂದು, ಟಾಲಿವುಡ್ನಲ್ಲಿ ಹೆಸರು ಮಾಡಿದ್ದಾರೆ. ಆದರೆ, ಇಂದಿಗೂ ತಮ್ಮ ಸ್ನೇಹಿತರು ಮತ್ತು ಬಂಧು - ಬಳಗದೊಂದಿಗೆ ಸಂಪರ್ಕದಲ್ಲಿದ್ದಾರೆ. ವರ್ಷಕ್ಕೆ ಒಂದೆರಡು ಬಾರಿ ಗಂಗಾವತಿಗೆ ಬಂದು ಹೋಗುತ್ತಿರುತ್ತಾರೆ.
ಇದನ್ನೂ ಓದಿ: 92ನೇ ಬಲಿದಾನ ದಿವಸ್ : ಮಹಾನ್ ದೇಶಭಕ್ತ ಭಗತ್ ಸಿಂಗ್ ಸ್ಮರಣೆ