ಇಂದು ಕನಸುಗಾರ ಕ್ರೇಜಿಸ್ಟಾರ್ ವಿ. ರವಿಚಂದ್ರನ್ 59ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಕಳೆದ ಎರಡು ವರ್ಷಗಳಿಂದ ಕ್ರೇಜಿ ಸ್ಟಾರ್ ಜನ್ಮದಿನ ಆಚರಿಸಿಕೊಂಡಿರಲಿಲ್ಲ. ಆದ್ರೆ ನಿನ್ನೆಯಷ್ಟೇ ಅವರ ಮಗಳು ಗೀತಾಂಜಲಿ ವಿವಾಹ ವಾರ್ಷಿಕೋತ್ಸವ ಆಗಿರುವುದರಿಂದ ಇಂದು ರವಿಚಂದ್ರನ್ ತಮ್ಮ ಕುಟುಂಬದ ಜೊತೆ ಬರ್ತಡೇ ಆಚರಿಸಿಕೊಂಡಿದ್ದಾರೆ.
ಈ ಬಾರಿ ಕೂಡಾ ನಾನು ನಿಮ್ಮೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಆದ್ದರಿಂದ ನೀವು ಮನೆ ಬಳಿ ಬರುವುದು ಬೇಡ ಎಂದು ರವಿಚಂದ್ರನ್ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದರು. ಕೊರೊನಾ ಹಾವಳಿಯಿಂದ ಎಲ್ಲವೂ ಸ್ತಬ್ಧವಾಗಿರುವುದರಿಂದ 60 ದಿನಗಳಿಗೂ ಹೆಚ್ಚು ಕಾಲ ಮನೆಯಲ್ಲೇ ಕಳೆದಿರುವ ಕ್ರೇಜಿಸ್ಟಾರ್, ಈ ಲಾಕ್ಡೌನ್ ಸಂದರ್ಭದಲ್ಲಿ ಒಂದೆರಡು ಕಥೆಗಳನ್ನು ಸಿದ್ಧಪಡಿಸಿದ್ದಾರೆ. ಅದರ ಜೊತೆಗೆ ತಮ್ಮದೇ ಆದ ಒಂದು ವೆಬ್ಸೈಟ್ ‘n1n1ly.com’ (ಒನ್ ಅಂಡ್ ಒನ್ಲಿ) ರಚನೆ ಮಾಡಿದ್ದಾರೆ. ಇದು ಈ ವರ್ಷದ ವಿ.ರವಿಚಂದ್ರನ್ ಅವರ ಬರ್ತಡೇ ವಿಶೇಷ ಎನ್ನಬಹುದು.
ಈ ಕೊರೊನಾ ವೈರಸ್ನಿಂದ ಲಾಕ್ಡೌನ್ ಆಗಿರುವ ಮನರಂಜನಾ ಕ್ಷೇತ್ರ ಒಟಿಟಿ ಪ್ಲಾಟ್ಫಾರ್ಮ್ ಕಡೆಗೆ ಹೊರಳಿಕೊಳ್ಳುತ್ತಿರುವುದನ್ನು ಸಹ ಕ್ರೇಜಿಸ್ಟಾರ್ ಗಮನಿಸಿದ್ದಾರೆ. ಅದಕ್ಕಾಗಿ ಅವರು ಒಂದು ಹೊಸ ಆ್ಯಪ್ ಕೂಡಾ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಆ್ಯಪ್ನಲ್ಲಿ ಅವರ ತಂದೆ ಹುಟ್ಟು ಹಾಕಿದ ಈಶ್ವರಿ ಪಿಕ್ಚರ್ಸ್ 50 ವರ್ಷ ಸಂಭ್ರಮದ ವಿವರಗಳು ಲಭ್ಯವಾಗಲಿವೆ. ಆನಂತರ ಇದೇ ಆ್ಯಪ್ ಕನ್ನಡ ಚಿತ್ರರಂಗಕ್ಕೂ ಉಪಯೋಗವಾಗುವ ರೀತಿಯಲ್ಲಿ ರಣಧೀರ ಸಿದ್ಧಪಡಿಸುತ್ತಿದ್ದಾರೆ.
ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಹಾಗೂ ಕಿಚ್ಚ ಸುದೀಪ್ ಅಭಿನಯದ ‘ರವಿ ಬೋಪಣ್ಣ’ ಈಗ ಸಂಪೂರ್ಣ ತಯಾರಾಗಿದೆ. ಈ ಚಿತ್ರದಲ್ಲಿ ವಿ. ರವಿಚಂದ್ರನ್ ಹಾಗೂ ಕಿಚ್ಚ ಸುದೀಪ್ ವಿಶೇಷವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕ್ರೇಜಿ ಸ್ಟಾರ್ ಅಭಿನಯದ ‘ರಾಜೇಂದ್ರ ಪೊನ್ನಪ್ಪ’ಕೂಡಾ ಬಹುತೇಕ ಚಿತ್ರೀಕರಣ ಮುಗಿದಿದೆ. ಸದ್ಯಕ್ಕೆ ಮಲಯಾಳಂ ಭಾಷೆಯಲ್ಲಿ ‘ದೃಶ್ಯಂ 2‘ ತಯಾರಾಗಿರುವ ಸುದ್ದಿ ಬಂದಿರುವುದರಿಂದ ಕ್ರೇಜಿ ಸ್ಟಾರ್ ಅದರ ಕನ್ನಡ ಆವೃತ್ತಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.