ಪೂರ್ಣಿಮಾ ಹಾಗೂ ನಟ ರಾಮಕುಮಾರ್ ಪುತ್ರ ಧಿರೆನ್ ರಾಮ್ಕುಮಾರ್ ಅಭಿನಯದ ನಿರ್ಮಾಪಕ ಜಯಣ್ಣ ಹಾಗೂ ಭೋಗೇಂದ್ರ ನಿರ್ಮಾಣದ ಚಿತ್ರ ‘ಶಿವ 143’ (ಇದಕ್ಕೆ ಮೊದಲು ದಾರಿ ತಪ್ಪಿದ ಮಗ ಎಂದು ಹೆಸರಿಡಲಾಗಿತ್ತು) 2021 ರ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಗೆ ಸಿದ್ದವಾಗಿದೆ. ಈ ಚಿತ್ರದ ಕಥಾ ನಾಯಕಿ ‘ಟಗರು’ ಖ್ಯಾತಿಯ ಮಾನ್ವಿತ ಹರೀಶ್. ಧಿರೆನ್ ರಾಮಕುಮಾರ್ ಈ ಚಿತ್ರದಲ್ಲಿ ಎರಡು ಶೆಡ್ ಅಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಭಾರತೀಯ ಚಿತ್ರ ರಂಗದಲ್ಲಿ ಪ್ರಥಮ ಎನ್ನಬಹುದಾದ ವಿಷಯ ಏನಪ್ಪಾ ಅಂದರೆ, ಕಲಾವಿದರ ಕುಟುಂಬದಿಂದ ಮೂರನೇ ಪೀಳಿಗೆಯ ಅದರಲ್ಲೂ ಒಂದೇ ಮನೆಯಿಂದ ಅಣ್ಣ ಹಾಗೂ ತಂಗಿ ಕನ್ನಡ ಚಿತ್ರ ರಂಗ ಪ್ರವೇಶ ಮಾಡುತ್ತಾ ಇರುವುದು ಇದೆ ಮೊದಲು. ಧನ್ಯ ಹಾಗೂ ಧಿರೆನ್ ಚಿತ್ರ ಭವಿಷ್ಯ 2021 ರ ಆರಂಭದಲ್ಲಿ ತೆರೆದುಕೊಳ್ಳಲಿದೆ.
ಗಡ್ಡ ಬಿಟ್ಟು ರಗಡ್ ಆಗಿ ಕಾಣುವ ನಾಯಕನಾಗಿ ತೆರೆ ಮೇಲೆ ಬರಲಿರುವ ಧಿರೆನ್, ನನ್ನ ಪಾತ್ರವನ್ನು ಜನ ಹೇಟ್ ಸಹ ಮಾಡಬಹುದು ಎಂದಿದ್ದಾರೆ. ಈ ಚಿತ್ರದಲ್ಲಿ ಅವರಿಗೆ ಐದು ಆ್ಯಕ್ಷನ್ ಹಾಗೂ ನಾಲ್ಕು ಹಾಡುಗಳಿವೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ.
ಹಲವಾರು ಜನಪ್ರಿಯ ಚಿತ್ರಗಳನ್ನು ನಿರ್ದೇಶನ ಮಾಡಿದ ಅನಿಲ್ ಕುಮಾರ್ ಈಗ 54 ದಿವಸಗಳ ಚಿತ್ರೀಕರಣ ಮಾಡಿ ಕೇವಲ 4 ದಿವಸಗಳಲ್ಲಿ ಒಂದು ಹಾಡಿನ ಚಿತ್ರೀಕರಣ ಬಾಕಿ ಉಳಿಸಿಕೊಂಡಿದ್ದಾರೆ. ಏಳು ತಿಂಗಳ ಕೊರೊನಾ ಕಾಟದ ಸಮಯದಲ್ಲಿ ಚಿತ್ರದ ಎಲ್ಲ ಚಟುವಟಿಕೆ ಮುಕ್ತಾಯ ಆಗಿದೆ. ನವೆಂಬರ್ ತಿಂಗಳಿನಲ್ಲಿ ಮೊದಲ ಟೀಸರ್ ಬಿಡುಗಡೆ ಆಗುತ್ತಿದೆ ಎಂದು ಧಿರೆನ್ ರಾಮಕುಮಾರ್ ಹೇಳಿದ್ದಾರೆ.
ಪೂರ್ಣಿಮ ಹಾಗೂ ನಟ ರಾಮಕುಮಾರ್ ಅವರ ಪುತ್ರಿ ಧನ್ಯ ರಾಮಕುಮಾರ್ ಚಿತ್ರ ‘ನಿನ್ನ ಸನಿಹಕೆ’ ಸಹ 2021 ರ ಆರಂಭದಲ್ಲಿ ಬಿಡುಗಡೆ ಆಗಲು ಸಿದ್ದವಾಗಿದೆ. ಸೂರಜ್ ಗೌಡ ಈ ಚಿತ್ರದ ನಟ ಹಾಗೂ ನಿರ್ದೇಶಕ. 2019 ರ ಆಗಸ್ಟ್ ತಿಂಗಳಿನಲ್ಲಿ ಈ ಚಿತ್ರ ‘ನಿನ್ನ ಸನಿಹಕೆ’ ಸೆಟ್ಟೇರಿತ್ತು. ಮೊದಲು ಸುಮನ್ ಜಾದುಗರ್ ನಿರ್ದೇಶಕ ಎಂದು ಹೇಳಲಾಗಿತ್ತು. ಅವರಿಗೆ ಅಪಘಾತ ಆಗಿದ್ದರಿಂದ ನಿರ್ದೇಶನದ ಜವಾಬ್ದಾರಿಯನ್ನು ನಟ ಸೂರಜ್ ಗೌಡ ನಿರ್ವಹಿಸಿದ್ದಾರೆ.
ಮೈಸೂರಿನ ರಂಗನಾಥ್ ಹಾಗೂ ಅಕ್ಷಯ್ ಈ ಚಿತ್ರದ ನಿರ್ಮಾಪಕರುಗಳು, ರಘು ದೀಕ್ಷಿತ್ ಸಂಗೀತ, ಅಭಿಲಾಷ್ ಛಾಯಾಗ್ರಹಣ ಮಾಡಿರುವ ಈ ಚಿತ್ರ ಈಗಾಗಲೇ ಮೊದಲ ಟೀಸರ್ ಬಿಡುಗಡೆ ಮಾಡಿಕೊಂಡಿದೆ.ಧನ್ಯ ರಾಮಕುಮಾರ್ ಈ ರೊಮ್ಯಾಂಟಿಕ್ ಕಾಮಿಡಿ ಸಿನಿಮಾವನ್ನು ಪ್ರೇಕ್ಷಕರು ನಿಜವಾಗಲೂ ಇಷ್ಟ ಪಡುತ್ತಾರೆ ಎಂದು ನಂಬಿದ್ದಾರೆ.