ಹೈದರಾಬಾದ್: ತೆಲಂಗಾಣ, ಆಂಧ್ರಪ್ರದೇಶ ಮತ್ತು ಕೇರಳದಲ್ಲಿ ದಿನೇ ದಿನೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದರ ವಿರುದ್ಧ ಹೋರಾಡುವ ಉದ್ದೇಶದಿಂದ ತೆಲುಗು ಖ್ಯಾತ ನಟ ಅಲ್ಲು ಅರ್ಜುನ್ 1.25 ಕೋಟಿ ರೂ. ದೇಣಿಗೆ ನೀಡಿದ್ದಾರೆ.
ಇಂದು ಐಎಎನ್‌ಎಸ್‌ನೊಂದಿಗೆ ಹಂಚಿಕೊಂಡ ವೀಡಿಯೊ ಸಂದೇಶದ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕೋವಿಡ್ 19 ಇಡೀ ಜಗತ್ತನ್ನೇ ಬದಲಾಯಿಸಿಬಿಟ್ಟಿದೆ. ಇದು ನಮ್ಮ ದೈನಂದಿನ ಜೀವನವನ್ನೂ ಬದಲಿಸಿದೆ. ಈ ರೀತಿಯ ಸಮಯದಲ್ಲೂ ವೈದ್ಯರು, ದಾದಿಯರು, ಮಿಲಿಟರಿ, ಪೊಲೀಸರು ಮತ್ತು ಹಲವು ಕ್ಷೇತ್ರಗಳ ಜನರು ನಮ್ಮ ಸಮಾಜಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿದ್ದಾರೆ ಎಂದು ಪ್ರಶಂಶೆ ವ್ಯಕ್ತಪಡಿಸಿದ್ದಾರೆ.
ಅವರಿಂದ ಸ್ಫೂರ್ತಿ ಪಡೆದು ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳದ ಜನರಿಗೆ 1.25 ಕೋಟಿ ರೂ. ಘೋಷಿಸಲು ಬಯಸುತ್ತೇನೆ ಎಂದ ಅವರು, ನೈರ್ಮಲ್ಯ ಕಾಪಾಡಿಕೊಳ್ಳಲು ಮತ್ತು ಪ್ರತ್ಯೇಕತೆಯಿಂದ ಇರಲು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ಅಲ್ಲು ಅವರ ಸೋದರಸಂಬಂಧಿ ರಾಮ್ ಚರಣ್ ಅವರು ನಿನ್ನೆಯಷ್ಟೇ ಸರ್ಕಾರಕ್ಕೆ ದೇಣಿಗೆ ನೀಡಿದ್ದರು. ಇಂದು ಅಲ್ಲು ಅರ್ಜುನ್ ಬೃಹತ್ ಮೊತ್ತದ ದೇಣಿಗೆ ನೀಡಿ ಸಾಮಾಜಿಕ ಬದ್ಧತೆ ಮೆರೆದಿದ್ದಾರೆ.