ಪ್ರಪಂಚದಲ್ಲಿ ಕೊರೊನಾ ಕರಾಳತೆ ಸೃಷಿ ಮಾಡಿದ್ದು, ಸದ್ಯ ಸೋಂಕಿನ ಭೀತಿ ಕಿರುತೆರೆ ಲೋಕವನ್ನು ಆವರಿಸಿದ್ದು, ಮಾರ್ಚ್ 19 ರಿಂದ ಮಾರ್ಚ್ 31ರ ವರೆಗೆ ಚಿತ್ರೀಕರಣವನ್ನು ಬಂದ್ ಮಾಡಲು ಚಿಂತನೆ ನಡೆಸಲಾಗಿದೆ.
ಸಿನಿಮಾ, ಧಾರಾವಾಹಿ ಮತ್ತು ಡಾಕ್ಯುಮೆಂಟರಿ ಚಿತ್ರೀಕರಣ ಸ್ವಲ್ಪ ದಿನಗಳ ಮಟ್ಟಿಗೆ ಶೂಟಿಂಗ್ ನಿಲ್ಲಿಸುವ ಪ್ರಸ್ತಾಪವನ್ನು ಟೆಲಿವಿಷನ್ ಅಸೋಷಿಯೇಷನ್ ಕೈಗೆತ್ತಿಕೊಂಡಿದ್ದು ಸಂಘದೊಂದಿಗೆ, ಸಾಕಷ್ಟು ಸಂಘಗಳು ಜಂಟಿಯಾಗಿ ಸಭೆಯೊಂದನ್ನು ನಡೆಸಿದೆ. ಆದರೆ, ಯಾವುದೇ ಗಟ್ಟಿಯಾದ ನಿರ್ಧಾರವನ್ನು ಇದುವರೆಗೂ ಕೈಗೊಂಡಿಲ್ಲ ಎಂದು ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ರವಿಕಿರಣ್ ತಿಳಿಸಿದ್ದಾರೆ.
ಈ ಬಗ್ಗೆ ನಿರ್ಮಾಪಕರಿಗೆ ಮೂರು ದಿನಗಳ ಕಾಲಾವಕಾಶವನ್ನು ನೀಡಲು ಸಹ ಟೆಲಿವಿಷನ್ ಅಸೋಷಿಯೇಷನ್ ನಿರ್ಣಯ ತೆಗೆದುಕೊಂಡಿದೆ. ಈಗಾಗಲೇ ಚೆನ್ನೈ ಮುಂಬೈ ಸೇರಿದಂತೆ ಮಹಾನಗರಗಳಲ್ಲಿ ಇಂತಹ ತೀರ್ಮಾನ ಕೈಗೊಳ್ಳಲು ಚಿಂತನೆ ನಡೆಸಲಾಗಿದೆ. ಹಾಗೆಯೇ ಬೆಂಗಳೂರಿನಲ್ಲಿಯೂ ಸಹ ಚಿತ್ರೀಕರಣ ನಡೆಸಬೇಕೋ ಬೇಡವೋ ಎಂಬುದರ ಬಗ್ಗೆ ಎರಡು ದಿನಗಳಲ್ಲಿ ದೃಢ ನಿರ್ಧಾರ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಕಿರುತೆರೆ ಕಲಾವಿದರಿಗೆ ಮಾಹಿತಿ ತಿಳಿಸಿದ್ದೇವೆ. ನಮ್ಮ ಶೂಟಿಂಗ್‍ನಲ್ಲಿ 100 ಕಲಾವಿದರೂ ಒಂದೇ ಕಡೆ ಸೇರುವುದಿಲ್ಲ. ಆದರೂ ಯಾರಿಗಾದರೂ ಆರೋಗ್ಯ ಸಮಸ್ಯೆ ಕಂಡು ಬಂದರೆ ಶೂಟಿಂಗ್‍ಗೆ ಬರಬೇಡಿ ಎಂದು ತಿಳಿಸಿದ್ದೇವೆ. ಸೀರಿಯಲ್ ಪ್ರತಿದಿನ ಪ್ರಸಾರವಾಗಬೇಕು. ಹೀಗಾಗಿ ನಾವು ದಿನ ಶೂಟಿಂಗ್ ಮಾಡಬೇಕು. ಆದ್ದರಿಂದ ನಿರ್ಮಾಪಕರಿಗೆ ಮೂರು ದಿನಗಳ ಕಾಲಾವಕಾಶ ನೀಡಿದ್ದೇವೆ ಎಂದು ರವಿಕಿರಣ್ ಹೇಳಿದ್ದಾರೆ.