ಸ್ಯಾಂಡಲ್ವುಡ್ ನಟಿ ತೇಜಸ್ವಿನಿ ಪ್ರಕಾಶ್ ಬಗ್ಗೆ ಕೆಲವೊಂದು ಫೇಕ್ ಯೂಟ್ಯೂಬ್ ಹಾಗೂ ವೆಬ್ ಪೇಜ್ಗಳು ಇಲ್ಲಸಲ್ಲದ ಸುದ್ದಿ ಹರಡುತ್ತಿದ್ದು ಈ ಬಗ್ಗೆ ತೇಜಸ್ವಿನಿ ಪ್ರಕಾಶ್ ಆಕ್ರೋಶ ಹೊರ ಹಾಕಿದ್ದಾರೆ.
ಈ ನಕಲಿ ಸುದ್ದಿ, ವಿಡಿಯೋ ನೋಡಿ ತೇಜಸ್ವಿನಿ ಸಂಬಂಧಿಕರು ಹಾಗೂ ಸ್ನೇಹಿತರು ಅವರಿಗೆ ಮೇಲಿಂದ ಮೇಲೆ ಕರೆ ಮಾಡಿ ವಿಚಾರಿಸುತ್ತಿದ್ದಾರೆ. ತೇಜಸ್ವಿನಿ ತಂದೆ ಇತ್ತೀಚೆಗೆ ನಿಧನರಾಗಿದ್ದಾರೆ. ಈ ನೋವಿನಿಂದ ಹೊರ ಬರುವ ಮುನ್ನವೇ ಅವರ ಬಗ್ಗೆ ಹರಿದಾಡುತ್ತಿರುವ ಈ ಸುಳ್ಳು ಸುದ್ದಿಯನ್ನು ನೋಡಿ ತೇಜಸ್ವಿನಿ ಶಾಕ್ ಆಗಿದ್ದಾರೆ. ಯೂಟ್ಯೂಬ್ನ ಕೆಲವೊಂದು ನಕಲಿ ಖಾತೆಗಳಲ್ಲಿ ತೇಜಸ್ವಿನಿ ಇನ್ನಿಲ್ಲ ಎಂಬ ಸುದ್ದಿ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ. ಇದರ ಬಗ್ಗೆ ತೇಜಸ್ವಿನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
- " class="align-text-top noRightClick twitterSection" data="">
ಯೂಟ್ಯೂಬ್ ಸ್ಕ್ರೀನ್ ಶಾಟ್ ತೆಗೆದು ತಮ್ಮ ಫೇಸ್ಬುಕ್ನಲ್ಲಿ ಷೇರ್ ಮಾಡಿಕೊಂಡಿರುವ ತೇಜಸ್ವಿನಿ, ಸಿನಿಮಾ ಕಲಾವಿದರು ಎಂದ ಮೇಲೆ ಗಾಸಿಪ್ಗಳು ಹರಿದಾಡುವುದು ಸಾಮಾನ್ಯ. ಆದರೆ ಒಬ್ಬ ವ್ಯಕ್ತಿ ಬದುಕಿರುವಾಗಲೇ ಅವರು ಇಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸುವುದು ನಿಜಕ್ಕೂ ಬೇಸರದ ಸಂಗತಿ. ಇತ್ತೀಚೆಗಷ್ಟೇ ಅಪ್ಪ ತೀರಿ ಹೋಗಿದ್ದು ಆ ದುಃಖದಿಂದ ನಾವು ಇನ್ನು ಕೂಡಾ ಹೊರಬಂದಿಲ್ಲ. ಇದರ ಜೊತೆಗೆ ನಾನು ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂಬ ಸುಳ್ಳು ಸುದ್ದಿ ನನಗೆ ಮತ್ತಷ್ಟು ಬೇಸರ ಉಂಟುಮಾಡಿದೆ. ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕಾನೂನಿನ ಪ್ರಕಾರ ಹೋರಾಡುತ್ತೇನೆ ಎನ್ನುತ್ತಾರೆ ತೇಜಸ್ವಿನಿ.
ಸದ್ಯಕ್ಕೆ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ತೇಜಸ್ವಿನಿ ಪ್ರಕಾಶ್, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನನ್ನರಸಿ ರಾಧೆ' ಧಾರಾವಾಹಿಯಲ್ಲಿ ಲಾವಣ್ಯ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.