ಬೆಂಗಳೂರು: ಇತ್ತೀಚೆಗೆ ನಿಧನರಾಗಿದ್ದ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರ ಗೀತ ನಮನ ಕಾರ್ಯಕ್ರಮಕ್ಕೆ ಬಂದಿದ್ದ ತಮಿಳು ನಟ ವಿಶಾಲ್ ಹಿರಿಯ ನಟಿ, ಬಹುಭಾಷಾ ತಾರೆ ಬಿ.ಸರೋಜಾದೇವಿ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಪುನೀತ್ ರಾಜ್‍ಕುಮಾರ್ ಮನೆ ಹಾಗೂ ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿ ಸ್ಥಳಕ್ಕೆ ತೆರಳಿ ವಿಶಾಲ್ ಪೂಜೆ ಸಲ್ಲಿಸಿದ್ದರು. ಬಳಿಕ ಪಂಚ ಭಾಷೆ ತಾರೆಯಾಗಿ ಭಾರತೀಯ ಚಿತ್ರರಂಗದಲ್ಲಿ ಮಿಂಚಿದ್ದ ಬಿ. ಸರೋಜಾದೇವಿ ಅವರ ಮನೆಗೆ ತೆರಳಿ ಅರ್ಧಗಂಟೆಗೂ ಹೆಚ್ಚುಕಾಲ ಅವರೊಂದಿಗೆ ಮಾತುಕತೆ ನಡೆಸಿ ಚೆನ್ನೈಗೆ ವಾಪಸ್ ಆಗಿದ್ದಾರೆ.
ಪುನೀತ್ ರಾಜ್ಕುಮಾರ್ ಓದಿಸುತ್ತಿದ್ದ ಮಕ್ಕಳ ವಿದ್ಯಾಭ್ಯಾಸದ ಹೊಣೆಯನ್ನ ನಾನು ವಹಿಸಿಕೊಳ್ಳುತ್ತೇನೆ ಎಂದು ನಟ ವಿಶಾಲ್ ಹೇಳಿದ್ದಾರೆ. ಅದರಂತೆ ಎರಡು ದಿನದ ಹಿಂದೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಪುನೀತ್ ಗೀತ ನಮನ ಕಾರ್ಯಕ್ರಮಕ್ಕೆ ನಟ ವಿಶಾಲ್ ಬಂದಿದ್ದರು. ಈ ವೇಳೆ ಮಾತನಾಡಿದ್ದ ಅವರು, ಶಕ್ತಿಧಾಮದ 1,800 ಹೆಣ್ಣು ಮಕ್ಕಳ ಸಂಪೂರ್ಣ ಜವಾಬ್ದಾರಿ ನನ್ನದು ಅಂತಾ ಹೇಳಿದ್ದಾರೆ.
ಪುನೀತ್ ಅವರು ಒಳ್ಳೆ ಮನುಷ್ಯ, ನನಗೆ ಪುನೀತ್ ದೊಡ್ಡ ಅಣ್ಣನ ತರ, ತಮ್ಮನಾಗಿ ನಾನು ಪುನೀತ್ಗೆ ಭಾಷೆ ಕೊಡ್ತಿದ್ದೇನೆ, ಕೊಟ್ಟ ಮಾತನ್ನ ಉಳಿಸಿಕೊಳ್ತೇನೆ ಎಂದು ವಿಶಾಲ್ ಹೇಳಿದ್ದಾರೆ. ಪುನೀತ್ ರಾಜ್ಕುಮಾರ್ ಸದ್ದಿಲ್ಲದೆ ಸಾಕಷ್ಟು ಸಮಾಜಮುಖಿ ಕಾರ್ಯಗಳಲ್ಲಿ ಕೂಡ ತೊಡಗಿಕೊಂಡಿದ್ದರು ಎಂಬ ವಿಚಾರ ಅವರ ನಿಧನ ನಂತರ ಹೆಚ್ಚು ಹೆಚ್ಚು ಗೊತ್ತಾಗುತ್ತಿದೆ ಅಂತಾ ಪುನೀತ್ ಬಗ್ಗೆ ಅಭಿಮಾನದ ಮಾತುಗಳನ್ನ ವಿಶಾಲ್ ಹಾಡಿದ್ದರು.