ಚೆನ್ನೈ: ತಮಿಳು ಸೂಪರ್ ಸ್ಟಾರ್ ಸೂರ್ಯ ಅಭಿನಯದ ಹಾಗೂ ಅವರ ನಿರ್ಮಾಣ ಸಂಸ್ಥೆ 2 ಡಿ ಚಲನಚಿತ್ರ ನಿರ್ಮಿಸಿದ ಚಿತ್ರಗಳಿಗೆ ನಿಷೇಧ ಹೇರುವುದಾಗಿ ತಮಿಳುನಾಡು ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್ ಮಾಲೀಕರ ಸಂಘ ಬೆದರಿಕೆ ಹಾಕಿದೆ.
ಸೂರ್ಯ ನಿರ್ಮಿಸಿದ ಮತ್ತು ಅವರ ಪತ್ನಿ ಜ್ಯೋತಿಕಾ ಅಭಿನಯದ ಪೊನ್ ಮಗಳ್ ವಂಧಲ್ ಚಿತ್ರವನ್ನು ನೇರವಾಗಿ ಒಟಿಟಿ ಪ್ಲಾಟ್ ಫಾರ್ಮ್‌ನಲ್ಲಿ ಬಿಡುಗಡೆ ಮಾಡಲಾಗುವುದು ಎಂಬ ಸುದ್ಧಿಯ ನಂತರ ಈ ನಿರ್ಧಾರ ಹೊರಬಿದ್ದಿದೆ.
ಈ ಬಗ್ಗೆ ಟ್ವೀಟ್ ಮಾಡಿದ್ದ ನಟ ಸೂರ್ಯ, "ಪ್ರೀಮಿಯರ್ ಅಲರ್ಟ್ ಪಬ್ಲಿಕ್ ಅಡ್ರೆಸ್ ಲೌಡ್ ಸ್ಪೀಕರ್: ಮೊದಲ ತಮಿಳು ಚಿತ್ರ ಪೊನ್ ಮಗಳ್ ವಂಧಲ್ ನೇರವಾಗಿ ಒಟಿಟಿ ಫ್ಲಾಟ್ ಫಾರ್ಮ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಬರೆದುಕೊಂಡಿದ್ದರು. ಸೂರ್ಯ ಟ್ವೀಟ್ ಮಾಡಿದ ಬೆನ್ನಲ್ಲೇ ವಿಡಿಯೋ ಮೂಲಕ ಪ್ರತಿಕ್ರಿಯಿಸಿದ ತಮಿಳು ಥಿಯೇಟರ್ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಪನ್ನೀರ್‌ಸೆಲ್ವಂ, ಚಿತ್ರಮಂದಿರಗಳಿಗಾಗಿ ನಿರ್ಮಿಸಲಾದ ಚಲನಚಿತ್ರಗಳು ಮೊದಲು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕೆ ಹೊರತು, ಒಟಿಟಿ ಪ್ಲಾಟ್ ಫಾರ್ಮ್‌ಗಳಲ್ಲಿ ಅಲ್ಲ. ಈ ನಿರ್ಧಾರವನ್ನು ಹಿಂತೆಗೆದುಕೊಳ್ಳದಿದ್ದರೆ ಸೂರ್ಯ ಅಭಿನಯದ ಚಿತ್ರಗಳನ್ನು ಬಿಡುಗಡೆ ಮಾಡುವುದನ್ನು ನಿಷೇಧಿಸಲಾಗುವುದು ಎಂದು ಹೇಳಿದ್ದಾರೆ.
ಈ ನಿರ್ಧಾರ ಕಾರ್ಯರೂಪಕ್ಕೆ ಬಂದರೆ, ಸೂರ್ಯ ಅವರ ಮುಂಬರುವ ಚಿತ್ರ ಸೂರಾರೈ ಪೊಟ್ರು ಮೇಲೆ ಪರಿಣಾಮ ಬೀರಬಹುದು.