ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ ಇದ್ದರೂ ಕಲಾವಿದರ ಪ್ರಮುಖ ಸಂಘದ ಚಟುವಟಿಕೆ ನಿರೀಕ್ಷಿತ ಮಟ್ಟದಲ್ಲಿ ಆಗಲಿಲ್ಲ ಎಂಬ ಕಾರಣಕ್ಕೆ ಬೇರೆ ಪೋಷಕರ ಸಂಘಗಳು ಡಾ. ಅಂಬರೀಶ್ ಇರುವಾಗಲೇ ಸ್ಥಾಪನೆಯಾಯಿತು. ಅಂಬಿ ನಿಧನದ ಬಳಿಕ ಕಲಾವಿದರ ಸಂಘವನ್ನು ಮುನ್ನಡೆಸುವುದು ಯಾರು ಎಂಬ ಚರ್ಚೆಯಾಗುತ್ತಿದೆ.
ನಾಲ್ಕು ಅಂತಸ್ತಿನ ಕಲಾವಿದರ ಭವನದಲ್ಲಿ ಕನ್ನಡ ಸಿನಿಮಾಗಳಿಗೆ ಸಂಬಂಧಿಸಿದ ಚಟುವಟಿಕೆಗಳು ನಡೆಯುತ್ತಿರುವುದನ್ನು ಬಿಟ್ಟರೆ ಬೇರಾವ ಗಮನಾರ್ಹ ಚಟುವಟಿಕೆ ನಡೆಯುತ್ತಿಲ್ಲ. ಅಂಬರೀಶ್ ನಿಧನರಾದ ಬಳಿಕ ಕಲಾವಿದರ ಉಸ್ತುವಾರಿ ಯಾರು ಎಂಬ ಚರ್ಚೆ ನಡೆಯುತ್ತಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಅಥವಾ ಡಾ. ಶಿವರಾಜ್ಕುಮಾರ್ ಇಬ್ಬರಲ್ಲಿ ಒಬ್ಬರು ಅದರ ಉಸ್ತುವಾರಿ ವಹಿಸಿಕೊಳ್ಳುತ್ತಾರೆ ಎನ್ನಲಾಗಿತ್ತು. ಆದರೆ ಕಲಾವಿದರ ಸಂಘದ ಚುನಾವಣೆ ಆಗುವವರೆಗೆ ಯಾವುದೇ ಚಟುವಟಿಕೆ ಸಾಧ್ಯವಿಲ್ಲ ಎನ್ನುತ್ತಿದೆ ಒಂದು ವರ್ಗ.
ಸಂಸದೆ ಸುಮಲತಾ ಅಂಬರೀಶ್ ಕಲಾವಿದರ ಸಂಘದ ಅಧ್ಯಕ್ಷ ಸ್ಥಾನ ನೀಡಬೇಕು ಎಂಬುದು ಹಲವರು ಒತ್ತಾಯ ಮಾಡುತ್ತಿದ್ದಾರೆ. ಸುಮಲತಾ ಅವರು ಸಂಸದರಾಗಿದ್ದು ಚಿತ್ರರಂಗದ ಸಮಸ್ಯೆಗಳನ್ನು ಸುಲಭವಾಗಿ ಅವರು ಪರಿಹರಿಸಬಹುದು ಹಾಗೂ ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿ ಸಂಘದಕ್ಕೆ ಆಗಬೇಕಾಗಿರುವ ಕೆಲಸವನ್ನು ಅವರು ಸುಲಭವಾಗಿ ಮಾಡಬಲ್ಲರು ಎಂಬುದೇ ಇದಕ್ಕೆ ಕಾರಣ.
ಸದ್ಯಕ್ಕೆ ರಾಕ್ಲೈನ್ ವೆಂಕಟೇಶ್ ಹಾಗೂ ದೊಡ್ಡಣ್ಣ ಮುಂದೆ ನಿಂತು ಕಲಾವಿದರ ಸಂಘದ ಕೆಲವೊಂದು ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಆದರೆ 4 ಅಂತಸ್ತಿನ ಕಟ್ಟಡ ಸರಿಯಾಗಿ ಸದ್ಭಳಕೆ ಆಗುತ್ತಿಲ್ಲ ಎಂಬುದು ಹಲವರ ಬೇಸರಕ್ಕೆ ಕಾರಣವಾಗಿದೆ. ಅಂಬರೀಶ್ ಇದ್ದಾಗ 3 ಹಾಗೂ 4ನೇ ಅಂತಸ್ತನ್ನು ಕಲಾವಿದರ ಸಂಘದ ಕೆಲಸಗಳಿಗೆ ಬಳಸಿಕೊಂಡು 1 ಹಾಗೂ 2ನೇ ಅಂತಸ್ತಿನ ಕಟ್ಟಡವನ್ನು ಬಾಡಿಗೆ ನೀಡುವುದು ಎಂದು ತೀರ್ಮಾನಿಸಲಾಗಿತ್ತು. ಬಾಡಿಗೆ ರೂಪದಲ್ಲಿ 8 ಲಕ್ಷ ರೂಪಾಯಿ ಕೂಡಾ ಬರಬಹುದು ಎಂಬ ಮಾತು ಕೂಡಾ ಕೇಳಿಬಂದಿತ್ತು. ಈ ಹಣದಿಂದ ಕಲಾವಿದರ ಸಂಘದ ಸಾಮಾನ್ಯ ಖರ್ಚು ವೆಚ್ಚಗಳನ್ನು ನೋಡಿಕೊಳ್ಳಬಹುದು ಎಂದು ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಕಲಾವಿದರ ಸಂಘದ ಚುನಾವಣೆ ನಡೆಯದೇ ಇದನ್ನೆಲ್ಲಾ ತೀರ್ಮಾನಿಸುವಂತಿಲ್ಲ.
ಒಟ್ಟಿನಲ್ಲಿ ಭಾರತೀಯ ಚಿತ್ರರಂಗದಲ್ಲಿ ಯಾವುದೇ ಭಾಷೆಯ ಚಿತ್ರರಂಗ ಮಾಡಿಕೊಳ್ಳದ ಕಲಾವಿದರ ಭವನವನ್ನು ಕನ್ನಡ ಚಿತ್ರರಂಗ ಮಾಡಿಕೊಂಡಿರುವುದು ಹೆಮ್ಮೆಯ ವಿಚಾರ ಎನ್ನಬಹುದು.