ಪ್ರತಿ ಬಾರಿ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಕಿಚ್ಚ ಸುದೀಪ್, ಈ ಬಾರಿ ಕೊರೊನಾ ಕಾರಣದಿಂದ ಬಹಳ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಹೈದರಾಬಾದ್ನಲ್ಲಿ 'ಫ್ಯಾಂಟಮ್' ಚಿತ್ರೀಕರಣದಲ್ಲಿ ಬ್ಯುಸಿ ಇರುವ ಸುದೀಪ್ 3 ದಿನಗಳ ಕಾಲ ಬೆಂಗಳೂರಿಗೆ ಬಂದು ತೆರಳಿದ್ದರು.
ಆದರೆ ಅಭಿಮಾನಿಗಳು ಮಾತ್ರ ಸುದೀಪ್ ಹುಟ್ಟುಹಬ್ಬವನ್ನು ಸೆಪ್ಟೆಂಬರ್ 2 ರಂದು ಅರ್ಥಪೂರ್ಣವಾಗಿ ಆಚರಿಸಿದ್ದರು. ತಾವು ಇರುವಲ್ಲಿಯೇ ಸುದೀಪ್ ಕಟೌಟ್ ಮಾಡಿಸಿ ಹೂವಿನ ಹಾರ ಹಾಕಿ, ಕೇಕ್ ಕತ್ತರಿಸಿ ಅನಾಥ ಮಕ್ಕಳಿಗೆ ಸಿಹಿ, ಬಟ್ಟೆ, ಪುಸ್ತಕ ಹಂಚಿದ್ದರು. ಅಭಿಮಾನಿಗಳ ಈ ಪ್ರೀತಿಗೆ ಸುದೀಪ್ ಸೋತು ಹೋಗಿದ್ದಾರೆ. ಅಷ್ಟೇ ಅಲ್ಲ, ವಿಡಿಯೊ ಮೂಲಕ ಧನ್ಯವಾದ ಹೇಳಿದ್ದಾರೆ. 'ಬಹಳ ತಡವಾಗಿ ಈ ವಿಡಿಯೋ ಮಾಡುತ್ತಿದ್ದೇನೆ. ನನ್ನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಿರಿ. ನಿಮ್ಮ ಪ್ರೀತಿಗೆ ನಾನು ಅರ್ಹನೋ ಇಲ್ಲವೋ ತಿಳಿದಿಲ್ಲ, ಆದರೆ ನಿಮ್ಮೆಲ್ಲರಿಗೂ ಧನ್ಯವಾದಗಳು' ಎಂದು ಸುದೀಪ್ ವಿಡಿಯೋದಲ್ಲಿ ಹೇಳಿದ್ಧಾರೆ.
ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿರುವ ಸುದೀಪ್ ತಮ್ಮ ಟ್ರಸ್ಟ್ ಮೂಲಕ 'ಶಾಂತಿ ನಿವಾಸ' ಎಂಬ ಅನಾಥಾಶ್ರಮ ಕಟ್ಟಿಸುತ್ತಿದ್ದಾರೆ. ಕಿಚ್ಚನ ಹುಟ್ಟುಹಬ್ಬದಂದು ಪತ್ನಿ ಪ್ರಿಯಾ, ಶಾಂತಿ ನಿವಾಸಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು.