ಸುದೀಪ್ ಅಭಿನಯದ 'ಫ್ಯಾಂಟಮ್' ಚಿತ್ರದ ಕೊನೆಯ ಹಂತದ ಚಿತ್ರೀಕರಣ ಇದೀಗ ಕೇರಳದಲ್ಲಿ ಪ್ರಾರಂಭವಾಗಿದ್ದು, ಇನ್ನೊಂದು ತಿಂಗಳ ಕಾಲ ಅಲ್ಲೇ ಚಿತ್ರೀಕರಣ ಮುಂದುವರೆಯಲಿದೆ. ಈ ಮಧ್ಯೆ ಚಿತ್ರದಿಂದ ಒಂದು ಸುದ್ದಿ ಬಂದಿದ್ದು ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ 2021ರ ಜನವರಿಯಲ್ಲಿ ದುಬೈನ ಭುರ್ಜ್ ಖಲೀಫಾದಲ್ಲಿ 'ಫ್ಯಾಂಟಮ್' ಟೀಸರ್ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಸುದೀಪ್ ಕನ್ನಡ ಚಿತ್ರರಂಗಕ್ಕೆ ಬಂದಿದ್ದು 1997ರಲ್ಲಿ ಬಿಡುಗಡೆಯಾದ 'ತಾಯವ್ವ' ಚಿತ್ರದ ಮೂಲಕ. ಈ ಚಿತ್ರ ಬಿಡುಗಡೆಯಾಗಿ ಮತ್ತು ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟು 2022 ಕ್ಕೆ 25 ವರ್ಷಗಳು ತುಂಬಲಿದೆ. ಮುಂದಿನ ವರ್ಷದ ಆರಂಭದಿಂದಲೇ ಈ ಸಿಲ್ವರ್ ಜ್ಯೂಬ್ಲಿ ಸಂಭ್ರಮ ಪ್ರಾರಂಭವಾಗಲಿದ್ದು, ಒಂದು ವರ್ಷಗಳ ಕಾಲ ಈ ಸಂಭ್ರಮ ಮುಂದುವರೆಯಲಿದೆ ಎಂದು ಹೇಳಲಾಗುತ್ತಿದೆ. ಅದರ ಮೊದಲ ಹಂತವಾಗಿ 'ಫ್ಯಾಂಟಮ್' ಚಿತ್ರದ ಟೀಸರನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ. ಈ ಟೀಸರ್ ಬಿಡುಗಡೆ ಮೂಲಕ ಸಿಲ್ವರ್ ಜ್ಯೂಬಿಲಿ ಕಾರ್ಯಕ್ರಮವನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ.
ಇದನ್ನೂ ಓದಿ: ಕಿಚ್ಚನ 'ಫ್ಯಾಂಟಮ್' ಸಿನಿಮಾ ಬಗ್ಗೆ ತೆಲುಗು ಸ್ಟಾರ್ ನಾಗಾರ್ಜುನ ಹೇಳಿದ್ದೇನು..?
ಎಲ್ಲಾ ಸರಿ, ದುಬೈ ಮತ್ತು ಭುರ್ಜ್ ಖಲೀಫಾದಲ್ಲೇ ಟೀಸರ್ ಬಿಡುಗಡೆ ಏಕೆ ಎಂಬ ಪ್ರಶ್ನೆ ಸಹಜ. 'ಫ್ಯಾಂಟಮ್' ಚಿತ್ರದ ಸಹನಿರ್ಮಾಪಕರಾದ ಇನ್ವೀನಿಯೋ ಫಿಲ್ಮ್ಸ್ನ ಅಲಂಕಾರ್ ಪಾಂಡಿಯನ್ ಅವರು ದುಬೈನಲ್ಲಿ ನೆಲೆಯೂರಿದ್ದಾರೆ. ಅವರು ದೊಡ್ಡ ಮಟ್ಟದಲ್ಲಿ ಚಿತ್ರದ ಪ್ರಚಾರ ಕೆಲಸವನ್ನು ಆರಂಭಿಸಲು ಯೋಚಿಸಿದ್ದು, ಈ ನಿಟ್ಟಿನಲ್ಲಿ ಭುರ್ಜ್ ಖಲೀಫಾದಲ್ಲಿ ಚಿತ್ರದ ಟೀಸರ್ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ ಎನ್ನಲಾಗುತ್ತಿದೆ. 'ಫ್ಯಾಂಟಮ್' ಚಿತ್ರದಲ್ಲಿ ಸುದೀಪ್, ನೀತಾ ಅಶೋಕ್, ನಿರೂಪ್ ಭಂಡಾರಿ ಮುಂತಾದವರು ನಟಿಸುತ್ತಿದ್ದು, ಅನೂಪ್ ಭಂಡಾರಿ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ಚಿತ್ರದ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಜಾಕ್ ಮಂಜು ಮತ್ತು ಅಲಂಕಾರ್ ಪಾಂಡಿಯನ್ ಈ ಚಿತ್ರವನ್ನು ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.