ಆಗತಾನೇ ಬಿಡುಗಡೆಯಾದ ಮಲಯಾಳಂನ ದೃಶ್ಯ (ಮೊದಲ ಭಾಗ) ಸಿನಿಮಾವನ್ನು ನಾನೇ ಕನ್ನಡದಲ್ಲಿ ನಿರ್ದೇಶನ ಮಾಡಲು ತೀರ್ಮಾನಿಸಿದ್ದೆ. ಆದರೆ, ಕಾರಣಾಂತರಗಳಿಂದ ಅದು ಈಡೇರಲಿಲ್ಲ ಎಂದು ನಟ ಸುದೀಪ್ ಹಳೆಯ ಘಟನಾವಳಿಯೊಂದನ್ನು ನೆನಪು ಮಾಡಿಕೊಂಡರು.
‘ದೃಶ್ಯ 2’ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರವಿ ಸರ್ ಅವರ ಎಲ್ಲ ಕಾರ್ಯಕ್ರಮದಲ್ಲಿ ನಾನು ಇದ್ದೇನೆ. ಮುಂದೆಯೂ ಇರುತ್ತೇನೆ. ಅವರ ಕುಟುಂಬದಲ್ಲಿ ನನಗೊಂದು ಸ್ಥಾನ ಕೊಟ್ಟಿದ್ದಾರೆ. ಹಾಗಾಗಿ, ಯಾವಾಗಲೂ ನಾನು ಅವರಿಗೆ ಆಭಾರಿ ಎಂದು ಅವರ ಹೃದಯ ವೈಶಾಲ್ಯತೆಗೆ ಕೃತಜ್ಞತೆ ಸಲ್ಲಿಸಿದರು.
ಈ ವಿಷಯಕ್ಕೆ ನಾಜು ಅವರಿಂದ ಬೈಯಿಸಿಕೊಂಡಿದ್ದೆ: ಮಾಣಿಕ್ಯ ಚಿತ್ರೀಕರಣ ವೇಳೆ ರವಿ ಸರ್ ಅವರನ್ನು ಭೇಟಿಯಾಗಿದ್ದೆ. ಆಗತಾನೇ ಮಲಯಾಳಂನಲ್ಲಿ ದೃಶ್ಯ ಸಿನಿಮಾ ಬಂದಿತ್ತು. ಈ ಸಿನಿಮಾ ಚೆನ್ನಾಗಿದೆ, ನೀವು ನೋಡಿ ಎಂದು ರವಿ ಸರ್ಗೆ ನಾನೇ ಒತ್ತಾಯ ಮಾಡಿದ್ದೆ. ಅವರಿಂದ ಈ ವಿಷಯಕ್ಕೆ ಬೈಯಿಸಿಕೊಂಡಿದ್ದೆ. ಆದರೆ, ಕೊನೆಗೆ ನನ್ನ ಒತ್ತಾಯಕ್ಕೆ ಮಣಿದು ಸಿನಿಮಾ ನೋಡಿದರು.
ನಿಮಗೆ ಈ ಸಿನಿಮಾ ಇಷ್ಟವಾದರೆ ನಾನೇ ನಿರ್ದೇಶನ ಮಾಡುವೆ ಎಂದು ಸಹ ಮಾತು ಕೊಟ್ಟಿದ್ದೆ. ಆದರೆ, ಅಷ್ಟರಲ್ಲಾಗಲೇ ಚಿತ್ರದ ಹಕ್ಕನ್ನು ಬೇರೆಯವರು ಪಡೆದಿದ್ದರು. ಹಾಗಾಗಿ, ಅದು ಕೈಗೂಡಲಿಲ್ಲ ಎಂದು ತಮ್ಮ ಹಾಗೂ ರವಿಚಂದ್ರನ್ ಅವರ ನಡುವಿನ ಬಾಂಧವ್ಯವನ್ನು ಬಿಚ್ಚಿಟ್ಟರು.
ನಾನು ದೃಶ್ಯ (ಮೊದಲ ಭಾಗ)ವನ್ನು ನೋಡಿದ್ದು ಮೊದಲು ಕನ್ನಡದಲ್ಲಿ. ಅಲ್ಲಿಯವರೆಗೆ ಎಲ್ಲಿಯೂ ನೋಡಿರಲಿಲ್ಲ. ದೃಶ್ಯ ಭಾಗ 2 ಸಹ ನಾನು ಈವರೆಗೆ ಯಾವುದೇ ಭಾಷೆಯಲ್ಲಿ ನೋಡಿಲ್ಲ. ಹಾಗಾಗಿ, ಚಿತ್ರದ ಕುತುಹೂಲ ಹೆಚ್ಚಾಗಿದೆ ಎಂದರು.
ನನ್ನ ಹೆಂಡತಿ ಸಹ ಮಲಯಾಳಿ. ಆದರೆ, ನನಗೆ ಮಲಯಾಳಿ ಬರುವುದಿಲ್ಲ. ಅವರು ನೋಡುವಂತೆ ನನಗೆ ಹೇಳುತ್ತಿರುತ್ತಾರೆ. ಭಾಷೆಯ ತೊಂದರೆಯಿಂದ ನನಗೆ ನೋಡಲು ಆಗಿಲ್ಲ. ದೃಶ್ಯ 1 ಮತ್ತು ದೃಶ್ಯ 2 ಬೇರೆ ಬೇರೆ ಭಾಷೆಯಿಂದ ಕನ್ನಕ್ಕೆ ಬಂದವು. ದೃಶ್ಯ 3 ಕನ್ನಡದಿಂದಲೇ ಬೇರೆ ಬೇರೆ ಭಾಷೆಗೆ ಹೋಗುವಂತಾಗಲಿ. ಇಂದು ನಮ್ಮಲ್ಲೆರ ಆಸೆ ಎಂದು ಚಿತ್ರ ತಂಡಕ್ಕೆ ಶುಭ ಹಾರೈಸಿದರು.
ಇದನ್ನೂ ಓದಿ: 'ನನ್ನ ಅತಿಯಾದ ಬುದ್ಧಿವಂತಿಕೆಯನ್ನು ಕಟ್ಟಿಟ್ಟೇ ನಾನು ನಿರ್ದೇಶಕರ ಬಳಿ ಹೋಗಿದ್ದೆ'