ಒಂದು ಕಡೆ 'ಯುವರತ್ನ', 'ಪೊಗರು', 'ಏಕ್ ಲವ್ ಯಾ', 'ಮದಗಜ' ಮುಂತಾದ ಕನ್ನಡ ಚಿತ್ರಗಳೆಲ್ಲಾ ತೆಲುಗು, ತಮಿಳು ಮತ್ತು ಇತರೆ ಭಾಷೆಗಳಿಗೆ ಡಬ್ ಆಗುತ್ತಿರುವಾಗ, ಸುದೀಪ್ ಅಭಿನಯದ 'ಕೋಟಿಗೊಬ್ಬ 3' ಮಾತ್ರ ಯಾವುದೇ ಭಾಷೆಗೂ ಡಬ್ ಆಗುತ್ತಿರುವ ಸುದ್ದಿ ಇರಲಿಲ್ಲ. 'ಕೋಟಿಗೊಬ್ಬ 2' ಚಿತ್ರವು ತಮಿಳಿಗೆ ಡಬ್ ಆಗಿ ಏಕಕಾಲಕ್ಕೆ ಬಿಡುಗಡೆಯಾಗಿತ್ತು. ಆದರೆ, 'ಕೋಟಿಗೊಬ್ಬ 3' ಮಾತ್ರ ಕನ್ನಡಕ್ಕೆ ಸೀಮಿತವಾಗುತ್ತಿದೆ ಎಂಬ ಬೇಸರ ಸುದೀಪ್ ಅಭಿಮಾನಿಗಳಲ್ಲಿತ್ತು.
ಈಗ 'ಕೋಟಿಗೊಬ್ಬ 3' ಚಿತ್ರವು ತೆಲುಗಿಗೆ ‘ಕೆ3 - ಕೋಟಿಕೊಕ್ಕಡು’ ಎಂಬ ಹೆಸರಿನಲ್ಲಿ ಡಬ್ ಆಗುತ್ತಿದ್ದು, ಚಿತ್ರದ ಮೊದಲ ಪೋಸ್ಟರ್ ಶುಕ್ರವಾರ ಬಿಡುಗಡೆಯಾಗಿದೆ. ಈ ಚಿತ್ರದ ತೆಲುಗು ಡಬ್ಬಿಂಗ್ ಮತ್ತು ಓವರ್‌ಸೀಸ್ ಹಕ್ಕುಗಳನ್ನು ಶ್ರೇಯಸ್ ಮೀಡಿಯಾದ ಅಂಗಸಂಸ್ಥೆಯಾದ ಗುಡ್ ಸಿನಿಮಾ ಗ್ರೂಪ್ ಪಡೆದಿದೆ. ಬರೀ ಆಂಧ್ರ ಮತ್ತು ತೆಲಂಗಾಣವಷ್ಟೇ ಅಲ್ಲ, ಹೊರದೇಶಗಳಲ್ಲೂ ಬಿಡುಗಡೆ ಮಾಡುತ್ತಿದೆ.
'ಕೋಟಿಗೊಬ್ಬ 3' ಚಿತ್ರದ ಪ್ರಚಾರ ಕೆಲಸಗಳು ಪ್ರಾರಂಭವಾಗಿದ್ದು, ಮುಂದಿನ ತಿಂಗಳು ಚಿತ್ರದುರ್ಗದಲ್ಲಿ ಪ್ರೀ-ರಿಲೀಸ್ ಇವೆಂಟ್ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಚಿತ್ರತಂಡದ ಹಲವು ನಟ-ನಟಿಯರು, ತಂತ್ರಜ್ಞರು ಭಾಗವಹಿಸುವ ನಿರೀಕ್ಷೆ ಇದೆ. ಏಪ್ರಿಲ್ ಕೊನೆಯ ವಾರದಲ್ಲಿ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವ ಈ ಚಿತ್ರದಲ್ಲಿ ಸುದೀಪ್, ಮಡೋನಾ ಸೆಬಾಸ್ಟಿಯನ್, ರವಿಶಂಕರ್, ಅಫ್ತಾಬ್ ಶಿವದಾಸಾನಿ, ಶ್ರದ್ಧಾ ದಾಸ್ ಸೇರಿದಂತೆ ಹಲವರು ನಟಿಸಿದ್ದಾರೆ. ಸೂರಪ್ಪ ಬಾಬು ನಿರ್ಮಾಣದ ಈ ಚಿತ್ರವನ್ನು ಶಿವಕಾರ್ತಿಕ್ ನಿರ್ದೇಶಿಸಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ.