ಕನ್ನಡ ಚಿತ್ರರಂಗದಲ್ಲಿ ಬಹುಶ: 25 ವರ್ಷಗಳ ಸಿನಿಜರ್ನಿಯಲ್ಲಿ ಅನೇಕ ವಿಭಾಗಗಳಲ್ಲಿ, ಅನೇಕ ಭಾಷೆಗಳಲ್ಲಿ ಜನಪ್ರಿಯತೆ ಪಡೆದುಕೊಂಡ ನಟ ಬಹಳ ಅಪರೂಪ ಎನ್ನಬಹುದು. ಕಿಚ್ಚ ಸುದೀಪ್ ಈಗ 25 ವರ್ಷಗಳ ಸಿನಿಜರ್ನಿಯ ಸಿಲ್ವರ್ ಜ್ಯೂಬ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ಅವರು ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷಗಳಾಗಿವೆ.
ಸುದೀಪ್ ಸಂಜೀವ್ 'ತಾಯವ್ವ' ಸಿನಿಮಾಗೆ ಕೇವಲ ನಟ ಆಗಿ ಬಂದವರಲ್ಲ. ಇವರು ಕೂಡಾ ಕಿರುತೆರೆಯಿಂದಲೇ ಮೊದಲು ಕ್ಯಾಮರಾ ಎದುರಿಸಿದವರು. ಇದಕ್ಕೂ ಮುಂಚೆ ಅವರು ನಟಿಸಿದ್ದ ‘ಬ್ರಹ್ಮ' ಹಾಗೂ 'ಓ ಕುಸುಮಬಾಲೆ’ ಸಿನಿಮಾಗಳು ಮುಂದೆ ಸಾಗಲಿಲ್ಲ. ಆ ವೇಳೆ ‘ಪ್ರೇಮದ ಕಾದಂಬರಿ’ ಧಾರಾವಾಹಿಯಲ್ಲಿ ನಟಿಸಲು ಸುದೀಪ್ ಒಪ್ಪಿಕೊಂಡರು. ಆದರೆ ಈ 25 ವರ್ಷಗಳಲ್ಲಿ ಇವರ ಬೆಳವಣಿಗೆ ನಿರ್ದೇಶನ, ನಟನೆ, ನಿರೂಪಣೆ, ಕಂಠದಾನ, ಹಾಡುಗಾರಿಕೆ, ನಿರ್ಮಾಣ, ಸಿಸಿಎಲ್ ಸ್ಥಾಪನೆ ಅಲ್ಲದೆ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳ ಸಿನಿಮಾದಲ್ಲಿ ಆಕ್ರಮಿಸಿಕೊಂಡು ಜನಪ್ರಿಯತೆ ಜೊತೆಗೆ ಇಂಡಿಯನ್ ಆ್ಯಕ್ಟರ್ ಎಂದು ಖ್ಯಾತಿ ಗಳಿಸಿದ್ದಾರೆ. ಬಹುಶ: ಕನ್ನಡ ಚಿತ್ರರಂಗದಲ್ಲಿ ಯಾವ ನಟರೂ ಇಷ್ಟು ವಿಭಾಗಗಳಲ್ಲಿ ಕೆಲಸ ಮಾಡಿಲ್ಲ ಎಂದೇ ಹೇಳಬಹುದು.
'ತಾಯವ್ವ' ಸುದೀಪ್ ನಟಿಸಿದ ಮೊದಲ ಚಿತ್ರವಾದರೂ ಅವರಿಗೆ ಜನಪ್ರಿಯತೆ ತಂದುಕೊಟ್ಟದ್ದು ಮಾತ್ರ 'ಹುಚ್ಚ' ಸಿನಿಮಾ. ಕೆಲವೊಂದು ಸಿನಿಮಾಗಳನ್ನು ನಿರ್ದೇಶನ ಕೂಡಾ ಮಾಡಿ ಯಶಸ್ವಿಯಾದ ಕಿಚ್ಚ ಎಲ್ಲಾ ಭಾಷೆಗಳಲ್ಲಿ ಸುಮಾರು 60 ಸಿನಿಮಾಗಳಲ್ಲಿ ನಟಿಸಿದ್ದಾರೆ. ಬೇಸರದ ವಿಚಾರವೆಂದರೆ ಸುದೀಪ್ ಹಾಲಿವುಡ್ ಸಿನಿಮಾವೊಂದರಲ್ಲಿ ಕೂಡಾ ನಟಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಸದ್ಯಕ್ಕೆ ಅವರ 'ಕೋಟಿಗೊಬ್ಬ 3' ಬಿಡುಗಡೆಯಾಗಬೇಕಿದೆ. ನಂತರ ಅನೂಪ್ ಭಂಡಾರಿ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾರೆ. ಇನ್ನು ಸುದೀಪ್ 25 ವರ್ಷಗಳ ಸಿನಿಜರ್ನಿ ಹಿನ್ನೆಲೆ ಅಭಿಮಾನಿಗಳು, ಸಿನಿಗಣ್ಯರು, ಸ್ನೇಹಿತರು ಅವರಿಗೆ ಶುಭಾಶಯ ಕೋರುತ್ತಿದ್ದಾರೆ. ತನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದ ಅಭಿಮಾನಿಗಳಿಗೆ, ಸ್ನೇಹಿತರಿಗೆ , ಚಿತ್ರರಂಗದವರಿಗೆ ಸುದೀಪ್ ಕೂಡಾ ಧನ್ಯವಾದ ಅರ್ಪಿಸಿದ್ದಾರೆ.