ಸ್ಟಾರ್ಗಳು, ಅಭಿಮಾನಿಗಳೊಂದಿಗೆ ಸೋಷಿಯಲ್ ಮೀಡಿಯಾ ಮೂಲಕ ಸಂಪರ್ಕದಲ್ಲಿರುತ್ತಾರೆ. ಕೆಲವು ಸ್ಟಾರ್ಗಳು ಫೇಸ್ಬುಕ್ ಲೈವ್ನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದರೆ ಮತ್ತೆ ಕೆಲವೊಮ್ಮೆ ವಿಡಿಯೋ ಕಾಲ್ ಮೂಲಕ ಚಿಟ್ಚಾಟ್ ಮಾಡುತ್ತಾರೆ.
ಕಿಚ್ಚ ಸುದೀಪ್ ಕೂಡಾ ಆಗ್ಗಾಗ್ಗೆ ವಿದೇಶಿ ಅಭಿಮಾನಿಗಳೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡುತ್ತಿರುತ್ತಾರೆ. ಜೂನ್ 13 ರಂದು ಸುದೀಪ್ 18 ದೇಶಗಳ ಕನ್ನಡ ಅಭಿಮಾನಿಗಳೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದರು. ಈಗ ಮತ್ತೆ ಜೂನ್ 19 ರಂದು ಅಂದರೆ ನಾಳೆ ಗಲ್ಫ್ ದೇಶದಲ್ಲಿರುವ ಕನ್ನಡಿಗರೊಂದಿಗೆ ಮಾತನಾಡಲಿದ್ದಾರೆ.
ಈ ಚಿಟ್ಚಾಟ್ ಬಗ್ಗೆ ಗಲ್ಫ್ ಕನ್ನಡಿಗರು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಮಕ್ಕಳು ಕೂಡಾ ಸುದೀಪ್ ಅವರೊಂದಿಗೆ ಮಾತನಾಡಲು ಕಾಯುತ್ತಿರುವುದು ವಿಶೇಷ. ಈ ಚಿಟ್ ಚಾಟ್ ವೇಳೆ ಕನ್ನಡ ಭಾಷೆ ತಿಳಿಯದ ಮುಬಾರಕ್ ಅಲ್ ರಶೀದ್ ಎಂಬುವವರು ಕನ್ನಡ ಕಲಿತು ಕಿಚ್ಚ ಸುದೀಪ್ ಅವರ ಒಂದು ಹಾಡನ್ನು ಹಾಡಲು ಕಾಯುತ್ತಿದ್ದಾರೆ. ಇವರೊಂದಿಗೆ ತೆಲುಗು, ತಮಿಳು ಅಭಿಮಾನಿಗಳು, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಸುದೀಪ್ ಅಭಿಮಾನಿಗಳು ಕೂಡಾ ಈ ಲೈವ್ ಚಾಟ್ನಲ್ಲಿ ಸೇರಿಕೊಳ್ಳಲಿದ್ದಾರೆ.
ಜೂಮ್ ಮೂಲಕ ನಾಳೆ ಸಂಜೆ 5 ಗಂಟೆಗೆ ಕುವೈತ್, ಕತಾರ್, ಬಹರೈನ್ ಹಾಗೂ ಸೌದಿ ಅರಬಿಯಾ ಅಭಿಮಾನಿಗಳು, 6 ಗಂಟೆಗೆ ಒಮನ್, ಯುಎಇ ಹಾಗೂ ದುಬೈ ರಾತ್ರಿ 7.30ಕ್ಕೆ ಭಾರತದ ಅಭಿಮಾನಿಗಳೊಂದಿಗೆ ಕೂಡಾ ಅಭಿನಯ ಚಕ್ರವರ್ತಿ ಮಾತನಾಡಲಿದ್ದಾರೆ.