ಉಪೇಂದ್ರ ಅಭಿನಯದ ಕಬ್ಜ ಚಿತ್ರಕ್ಕೆ ಕೆಲವು ತಿಂಗಳುಗಳ ಹಿಂದೆ ಮಿನರ್ವ ಮಿಲ್ನಲ್ಲಿ ಸತತವಾಗಿ ಹಲವು ದಿನಗಳ ಕಾಲ ಚಿತ್ರೀಕರಣ ನಡೆದಿತ್ತು. ಉಪೇಂದ್ರ, ಪ್ರಮೋದ್ ಶೆಟ್ಟಿ ಮುಂತಾದವರ ಅಭಿನಯದಲ್ಲಿ ಹಲವು ಪ್ರಮುಖ ದೃಶ್ಯ ಚಿತ್ರೀಕರಿಸಲಾಗಿತ್ತು. ಆ ನಂತರ ಕೋವಿಡ್ 2ನೇ ಅಲೆಯಿಂದ ಚಿತ್ರೀಕರಣ ನಿಂತಿತ್ತು.
ಈವರೆಗೂ 100 ದಿನಗಳಿಗೂ ಹೆಚ್ಚು ಕಾಲ ಶೂಟಿಂಗ್ ನಡೆದಿದೆ. ಶೇ.60ರಷ್ಟು ಚಿತ್ರೀಕರಣ ಮುಕ್ತಾಯವಾಗಿದೆಯಂತೆ. ಬಾಕಿ ಇರುವ ಚಿತ್ರೀಕರಣವನ್ನು ಸೆಪ್ಟೆಂಬರ್ 13ರಿಂದ ಪುನಃ ಪ್ರಾರಂಭಿಸುವುದಕ್ಕೆ ನಿರ್ದೇಶಕ ಆರ್. ಚಂದ್ರು ಇದೀಗ ಮುಂದಾಗಿದ್ದಾರೆ.
ಪ್ರಮುಖವಾಗಿ, ಮಿನರ್ವ ಮಿಲ್ನಲ್ಲಿಯೇ 20 ಸೆಟ್ಗಳನ್ನು ನಿರ್ಮಿಸಿ, ಅಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಆ ಸೆಟ್ಗಳು ಹಾಳಾಗಿದ್ದರಿಂದ, ಅದರ ಮರು ನಿರ್ಮಾಣ ಕೆಲಸ ಇದೀಗ ಪ್ರಾರಂಭವಾಗಿದೆ. ಅಷ್ಟೇ ಅಲ್ಲ, ಮುಂದಿನ ಒಂದು ತಿಂಗಳ ಕಾಲ ಅಲ್ಲೇ ಚಿತ್ರೀಕರಣ ನಡೆಯಲಿದೆ. ಸುದೀಪ್ ಸಹ ಈ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.
ಆ ನಂತರ ಹೈದರಾಬಾದ್, ಪಾಂಡಿಚೆರಿ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಅಲ್ಲಿಗೆ ಈ ಚಿತ್ರಕ್ಕೆ 150 ದಿನಗಳ ಕಾಲ ಚಿತ್ರೀಕರಣ ನಡೆದಂತಾಗುತ್ತದೆ. ಈ ಹಂತದ ಚಿತ್ರೀಕರಣದಲ್ಲಿ ಕಬೀರ್ ದುಹಾನ್ ಸಿಂಗ್, ಬಿ. ಸುರೇಶ್, ಪ್ರಮೋದ್ ಶೆಟ್ಟಿ, ಸುನೀಲ್ ಪುರಾಣಿಕ್ ಸೇರಿದಂತೆ ಹಲವು ಕಲಾವಿದರು ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.
ಬಹುಶಃ ಇಷ್ಟೊಂದು ದಿನಗಳ ಕಾಲ ಚಿತ್ರೀಕರಣಗೊಂಡ ಎರಡನೆಯ ಚಿತ್ರ ಇದಾಗಲಿದೆ. ಇದಕ್ಕೂ ಮುನ್ನ, ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಚಿತ್ರ ತಂಡದವರು 180 ದಿನಗಳ ಕಾಲ ಚಿತ್ರೀಕರಣ ಮಾಡಿ, ಹೊಸ ದಾಖಲೆ ನಿರ್ಮಿಸಿದ್ದರು. ಈಗ ಕನ್ನಡದಲ್ಲಿ ಅತೀ ಹೆಚ್ಚು ದಿನಗಳ ಕಾಲ ಚಿತ್ರೀಕರಣಗೊಂಡ ಎರಡನೆಯ ಚಿತ್ರ ಎಂಬ ಹೆಗ್ಗಳಿಕೆಗೆ ಕಬ್ಜ ಪಾತ್ರವಾಗಲಿದೆ.
2020ರ ಆರಂಭದಲ್ಲಿ ಪ್ರಾರಂಭವಾದ ಕಬ್ಜ, ಅಕ್ಟೋಬರ್ ಅಥವಾ ನವೆಂಬರ್ನಲ್ಲಿ ಮುಕ್ತಾಯವಾಗುವ ಮುನ್ಸೂಚನೆ ಕಾಣುತ್ತಿದೆ. ಆ ನಂತರ ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ಪ್ರಾರಂಭವಾಗಲಿದ್ದು, ಎಲ್ಲ ಅಂದುಕೊಂಡಂತೆ ಆದರೆ, ಮುಂದಿನ ವರ್ಷದ ಯುಗಾದಿ ಹೊತ್ತಿಗೆ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಕನ್ನಡದಲ್ಲಿ ಚಿತ್ರೀಕರಣಗೊಂಡು ಒಟ್ಟು ಏಳು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಈ ಪ್ಯಾನ್ ಇಂಡಿಯಾ ಚಿತ್ರವನ್ನು ಆರ್.ಚಂದ್ರು ನಿರ್ದೇಶಿಸುತ್ತಿರುವುದಷ್ಟೇ ಅಲ್ಲ, ಕಥೆ-ಚಿತ್ರಕಥೆಯನ್ನೂ ರಚಿಸಿದ್ದಾರೆ. 60-70ರ ದಶಕದ ಭೂಗತಲೋಕದ ಕಥೆ ಈ ಚಿತ್ರದಲ್ಲಿದ್ದು, ಮೇಕಿಂಗ್ ಬಗ್ಗೆ ಒಳ್ಳೆಯ ಮಾತು ಕೇಳಿ ಬರುತ್ತಿವೆ.
ಇದನ್ನೂ ಓದಿ : ಸುದೀಪ್ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ನಿರ್ಮಾಪಕ ಜಾಕ್ ಮಂಜು.. ಕಾರಣ?