ಕಿರುತೆರೆ ಮೂಲಕ ಬಣ್ಣದ ಪಯಣ ಆರಂಭಿಸಿ ಬೆಳ್ಳಿತೆರೆಯಲ್ಲಿ ಮಿಂಚುತ್ತಿರುವ ನಟರಲ್ಲಿ ಶ್ರೀ ಮಹಾದೇವ್ ಕೂಡಾ ಒಬ್ಬರು. ಗಜಾನನ ಅ್ಯಂಡ್ ಗ್ಯಾಂಗ್ ಸಿನಿಮಾದಲ್ಲಿ ನಾಯಕನಾಗಿ ನಟಿಸುವ ಮೂಲಕ ಮತ್ತೊಮ್ಮೆ ಬೆಳ್ಳಿತೆರೆಯಲ್ಲಿ ಕಮಾಲ್ ಮಾಡಲು ಶ್ರೀ ಮಹಾದೇವ್ ತಯಾರಾಗಿದ್ದಾರೆ.
ಶ್ರೀ ಮಹಾದೇವ್ ನಟನಾ ಪಯಣಕ್ಕೆ ಮುನ್ನುಡಿ ಬರೆದದ್ದೇ ಕಿರುತೆರೆ. ವಿನು ಬಳಂಜ ನಿರ್ದೇಶನದ ಚಿಟ್ಟೆ ಹೆಜ್ಜೆ ಧಾರಾವಾಹಿಯಲ್ಲಿ ನೆಗೆಟಿವ್ ರೋಲ್ನಲ್ಲಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಶ್ರೀಮಹಾದೇವ್ ಮೊದಲ ಬಾರಿ ನಾಯಕರಾಗಿ ಕಾಣಿಸಿದ್ದು ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ. ಈ ಧಾರಾವಾಹಿಯಲ್ಲಿ ನಾಯಕ ಶ್ರೀ ಆಗಿ ಅಭಿನಯಿಸಿರುವ ಶ್ರೀಮಹಾದೇವ್ ಫ್ಯಾಮಿಲಿ ಮ್ಯಾನ್ ಆಗಿ ಕಾಣಿಸಿಕೊಂಡಿದ್ದಾರೆ.
ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನೀಲಿ ಧಾರಾವಾಹಿಯಲ್ಲಿ ನಾಯಕ ವಿಷ್ಣು ಆಗಿ ನಟಿಸಿದ್ದ ಶ್ರೀಮಹಾದೇವ್, ಇರುವುದೆಲ್ಲವ ಬಿಟ್ಟು ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ಸುದೀಪ್ ಅಭಿನಯದ ಕೋಟಿಗೊಬ್ಬ 3 ರಲ್ಲಿ ಬಣ್ಣ ಹಚ್ಚಿರುವ ಶ್ರೀಮಹಾದೇವ್ , ಕಲರ್ಸ್ ಕನ್ನಡ ವಾಹಿನಿಯ ಇಷ್ಟದೇವತೆ ಧಾರಾವಾಹಿಯಲ್ಲಿ ನಾಯಕ ಶ್ರೀರಾಮನಾಗಿ ನಟಿಸಿವ ಮೂಲಕ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದರು.
ಹೊಂದಿಸಿ ಬರೆಯಿರಿ ಸಿನಿಮಾದಲ್ಲಿ ನಾಯಕನಾಗಿ ನಟಿಸುವ ಮೂಲಕ ಮತ್ತೆ ದೊಡ್ಡ ಪರದೆಯತ್ತ ಮುಖ ಮಾಡಿರುವ ಶ್ರೀ ಮಹಾದೇವ್, ಗಜಾನನ ಅ್ಯಂಡ್ ಗ್ಯಾಂಗ್ ಚಿತ್ರದಲ್ಲೂ ಅಭಿನಯಿಸಲಿದ್ದಾರೆ. ಈ ಸಿನಿಮಾದಲ್ಲಿ ನಾನು ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದೇನೆ. ಮೊದಲಿನಿಂದಲೂ ನನಗೆ ಕಮರ್ಷಿಯಲ್ ಸಿನಿಮಾ ಮಾಡಬೇಕು ಎಂಬ ಮಹಾದಾಸೆ ಇತ್ತು. ಈ ಸಿನಿಮಾ ಮೂಲಕ ಅದು ನನಸಾಗಿದೆ ಎನ್ನುತ್ತಾರೆ. ಗಜ ಎಂಬ ಪಾತ್ರ ಮಾಡುತ್ತಿರುವ ಶ್ರೀ ಮಹಾದೇವ್, ಈ ಚಿತ್ರದಲ್ಲಿ ಎರಡು ಶೇಡ್ಗಳಲ್ಲಿ ನಟಿಸಲಿದ್ದಾರೆ.