ದೇಶದಲ್ಲಿ ಇದುವರೆಗೂ ಬಹಳಷ್ಟು ಜನರು ಕೊರೊನಾಗೆ ಬಲಿಯಾಗಿದ್ದಾರೆ. ಕಂಟೇನ್ಮೆಂಟ್ ಏರಿಯಾಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕಡೆ ಬಹುತೇಕ ಲಾಕ್ಡೌನ್ ಸಡಿಲಿಕೆ ಆಗಿದೆ. ಇನ್ಮುಂದೆ ಜನರ ಆರೋಗ್ಯದ ಬಗ್ಗೆ ಅವರೇ ನಿಗಾ ವಹಿಸಬೇಕು ಎಂದು ಸರ್ಕಾರ ಕೂಡಾ ಎಚ್ಚರಿಸಿದೆ.
ಜೂನ್ 25 ರಿಂದ ಎಸ್ಎಸ್ಎಲ್ಸಿ ಪರೀಕ್ಷೆಗಳು ಆರಂಭವಾಗಲಿವೆ. ಶಾಲಾ-ಕಾಲೇಜುಗಳು ಮುಚ್ಚಿದ್ದು ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಪಾಠ ಕೇಳುತ್ತಿದ್ದಾರೆ. ಆದರೆ ಎಲ್ಲರ ಬಳಿ ಸ್ಮಾರ್ಟ್ ಫೋನ್ ಲಭ್ಯವಿಲ್ಲ. ಇತ್ತೀಚೆಗೆ ಕೇರಳದ ವಿದ್ಯಾರ್ಥಿನಿಯೊಬ್ಬಳು ಇದೇ ವಿಚಾರಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಂತೂ ಸ್ಮಾರ್ಟ್ಫೋನ್ ಇಲ್ಲದೆ, ಇದ್ದರೂ ನೆಟ್ವರ್ಕ್ ಸಮಸ್ಯೆಯಿಂದ ಆನ್ಲೈನ್ ಮೂಲಕ ನಿಜಕ್ಕೂ ಕಲಿಯಲು ಸಾಧ್ಯವೇ ಇಲ್ಲ. ಈ ಬಗ್ಗೆ ನಟ ಶ್ರೀಮುರಳಿ ಕೂಡಾ ಬೇಸರ ವ್ಯಕ್ತಪಡಿಸಿದ್ದಾರೆ.
ಈ ವಿಚಾರವಾಗಿ ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ಶ್ರೀಮುರಳಿ, 'ಹಳ್ಳಿಗಳಲ್ಲೇ ಸಾಕಷ್ಟು ವಿಧ್ಯಾರ್ಥಿಗಳು ಪದವಿ ಪಡೆಯುವ ಕನಸಿನೊಂದಿಗೆ ವಿಧ್ಯಾಭ್ಯಾಸ ಮಾಡುತ್ತಿರುತ್ತಾರೆ. ಆನ್ ಲೈನ್ ಪಾಠ, ನೆಟ್ವರ್ಕ್ ಸಮಸ್ಯೆ, ಸತತ 5-6 ಗಂಟೆ ಮೊಬೈಲ್ ನೋಡಿ ಪಾಠ ಕಲಿಯುವುದು ನಿಜಕ್ಕೂ ಕಷ್ಟಕರ. ಸರ್ಕಾರ ವಿಧ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಿ ಕೈ ಹಿಡಿಯಲಿ ಎಂಬ ಮನವಿಯ ಜೊತೆಗೆ ಎಲ್ಲಾ ವಿಧ್ಯಾರ್ಥಿಗಳ ಜೊತೆಗೆ ನಾವಿದ್ದೇವೆ, ಗೊಂದಲ ಬೇಡ' ಎಂದು ಹೇಳುವ ಮೂಲಕ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿದ್ದಾರೆ. ಮುರಳಿ ಅವರ ಈ ನಿಲುವಿಗೆ ಅಭಿಮಾನಿಗಳು ಕೂಡಾ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇನ್ನು ಜುಲೈ 1 ರಿಂದ ಶಾಲೆಗಳನ್ನು ತೆರೆಯಲು ಸರ್ಕಾರ ಚಿಂತಿಸುತ್ತಿದೆ. ಈ ಬಗ್ಗೆ ಸಚಿವ ಸುರೇಶ್ ಕುಮಾರ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದ್ಧಾರೆ. ಸರ್ಕಾರದ ಈ ನಿರ್ಧಾರಕ್ಕೆ ಪೋಷಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ದಿನೇ ದಿನೆ ಕೊರೊನಾ ಹೆಚ್ಚುತ್ತಲೇ ಇದ್ದು ಈ ಭಯದ ನಡುವೆಯೂ ಮಕ್ಕಳನ್ನು ಹೇಗೆ ಶಾಲೆಗೆ ಕಳಿಸುವುದು ಎಂದು ಪೋಷಕರು ಯೋಚಿಸುತ್ತಿದ್ದಾರೆ. ಆದರೆ ಸರ್ಕಾರದ ಅಂತಿಮ ನಿರ್ಧಾರ ಏನು ಎಂಬುದನ್ನು ಕಾದು ನೋಡಬೇಕು.