ಪ್ರಸಿದ್ಧ ಹಿನ್ನೆಲೆ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ ಇದೇ ಮೊದಲ ಬಾರಿಗೆ ಜಯಂತ್ ಕಾಯ್ಕಿಣಿ ಅವರ ರಚನೆಗೆ ಧ್ವನಿ ನೀಡಿದ್ದಾರೆ. ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವ್ಯಾಧಿಯ ಬಗ್ಗೆ ಕಾಯ್ಕಿಣಿ ಮಾಹಿತಿ ಸಂಗ್ರಹಿಸಿ ಈ ಹಾಡು ಬರೆದಿದ್ದಾರೆ. ಎಸ್.ಪಿ.ಬಿ ಚಿಟಿಕೆ ಹೊಡೆಯುತ್ತಾ ಹಾಡನ್ನು ಸುಶ್ರಾವ್ಯವಾಗಿ ಹಾಡಿದ್ದು, ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಲಾಗಿದೆ.
'ಕಾಣದಂತೆ ಆಕ್ರಮಿಸಿದೆ ವೈರಿ ಕೊರೊನಾ, ಅದಕೆ ನಾವೇ ಈಗ ದಾರಿ ಆಗದಿರೋಣ...' ಎಂದು ಪ್ರಾರಂಭವಾಗುವ ಹಾಡಿನಲ್ಲಿ ಸಾರ್ವಜನಿಕರಿಗೆ ಉಪಯುಕ್ತವಾದ ಸಲಹೆ ಇದೆ. 'ಕಾಲಬುಡಕೆ ಮಾರಿ ಬರುವವರೆಗೆ ಕಾಯದಿರೋಣ....' ಎಂಬ ಸಾಲುಗಳು ಮಹಾಮಾರಿಯನ್ನು ರುದ್ರನರ್ತನವನ್ನು ಎಚ್ಚರಿಸುತ್ತಿದೆ.

'ಇದು ನಾವೇ ತಂದುಕೊಂಡ ಚಂಡಮಾರುತ, ಬಾನು, ನೀರು, ಕಾಡು ಧ್ವಂಸ ಮಾಡುತಾ... ನಮಗೆ ನಾವೇ ತಂದುಕೊಂಡೆವು ಚಂಡಮಾರುತ....' ಎಂಬ ಸಾಲುಗಳ ಅರ್ಥಗರ್ಭಿತವಾಗಿವೆ.
ಇಡೀ ವಿಶ್ವವೇ ಅನುಭವಿಸುತ್ತಿರುವ ಕೊರೊನಾ ಭೀತಿ ಬಗ್ಗೆ ಸಾಹಿತ್ಯ ವಲಯ ಹಾಗೂ ಸಂಗೀತ ವಲಯದ ಇಬ್ಬರು ದಿಗ್ಗಜರು ಸೇರಿಕೊಂಡು ತಿಳುವಳಿಕೆ ಹೇಳಿರುವುದು ನೆಟ್ಟಿಗರ ಪ್ರಶಂಸೆ ಗಳಿಸುತ್ತಿದೆ.