ಬೆಂಗಾಲಿ ಖ್ಯಾತ ನಟ ಸೌಮಿತ್ರ ಚಟರ್ಜಿ ಇಂದು ಕೊರೊನಾ ಸೋಂಕಿನಿಂದ ವಿಧಿವಶರಾಗಿದ್ದಾರೆ. 85 ವರ್ಷದ ಚಟರ್ಜಿ ಅಕ್ಟೋಬರ್ 6ರಂದು ಆಸ್ಪತ್ರೆಗೆ ದಾಖಲಾಗಿದ್ದರು. ನಂತ್ರ ಆರೋಗ್ಯ ಸುಧಾರಿಸದ ಕಾರಣ ನಮ್ಮನ್ನೆಲ್ಲರನ್ನು ಅಗಲಿದ್ದಾರೆ.
60-70ರ ದಶಕದಲ್ಲಿ ಭಾರತೀಯ ಸಿನಿ ರಂಗಕ್ಕೆ ಪಾದಾರ್ಪಣೆ ಮಾಡಿ ಒಂದೊಳ್ಳೆ ಹೆಸರು ಮಾಡಿದ ನಟ ಸೌಮಿತ್ರ ಚಟರ್ಜಿ ಕೋಲ್ಕತ್ತಾದ ಮಿರ್ಜಾಪುರದಲ್ಲಿ 1935ರಲ್ಲಿ ಜನಿಸಿದ್ದರು. ಭಾರತದ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರಾದ ಸತ್ಯಜಿತ್ ರೇ ನಿರ್ದೇಶನದ ಅಪುರ್ ಸೆನ್ಸಾರ್ ಚಿತ್ರದಲ್ಲಿ ಅಪು ಪಾತ್ರಕ್ಕೆ ಬಣ್ಣ ಹಚ್ಚಿ ದೊಡ್ಡ ಹೆಸರು ಮಾಡುತ್ತಾರೆ.
ಫ್ರಾನ್ಸ್ನಲ್ಲಿ ಚಿತ್ರರಂಗದವರಿಗೆ ನೀಡಲಾದ ಅತ್ಯುತ್ತಮ ಪ್ರಶಸ್ತಿ ಆರ್ಡ್ರೆ ಡೆಸ್ ಆರ್ಟ್ಸ್ ಮತ್ತು ಡೆಸ್ ಲೆಟ್ರೆಸ್ ಗೌರವವನ್ನು ಪಡೆದ ಮೊದಲ ಭಾರತೀಯ ನಟ ಸೌಮಿತ್ರ ಚಟರ್ಜಿ. ಆಸ್ಕರ್ ಪ್ರಶಸ್ತಿ ಪಡೆದ ಸತ್ಯಜಿತ್ ರೇ ಅವರಿಗೆ ಅಚ್ಚುಮೆಚ್ಚಿನ ನಟನಾಗಿದ್ದ ಚಟರ್ಜಿ, ರೇ ಅವರೊಂದಿಗೆ 15 ಸಿನಿಮಾಗಳನ್ನು ಮಾಡಿದ್ದಾರೆ.
ತಮ್ಮ ಶಾಲಾ ದಿನಗಳಿಂದಲೇ ನಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಸೌಮಿತ್ರ ಚಟರ್ಜಿ, ಹತ್ತಾರು ಸ್ಟೇಜ್ ಕಾರ್ಯಕ್ರಮಗಳಲ್ಲಿ ನಟಿಸಿದ್ದರು. ಸತ್ಯಜಿತ್ ನಿರ್ದೇಶನದ ಚಾರುಲತಾ, ಸೋನಾರ್ ಕೆಲ್ಲಾ, ಅರಣ್ಯರ್ ದಿನ್ ರಾತ್ರಿ, ದೇವಿ, ತೀನ್ ಕನ್ಯಾ, ಅಭಿಜನ್, ಕಾಪುರುಶ್, ಅಶಾನಿ ಸಂಕೇತ್, ಜೋಯಿ ಬಾಬಾ ಫೆಲುನಾಥ್, ಘರೆ ಬೈರ್ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ನಿರ್ದೇಶಕರಾದ ತರುಣ್ ಮುಜುಂದರ್, ತಪನ್ ಸಿನ್ಹಾ ಮತ್ತು ಮೃಣಾಲ್ ಸೇನ್ ಜೊತೆ ಚಟರ್ಜಿ ಕೆಲಸ ಮಾಡಿದ್ದಾರೆ.
ಇವರ ಸಾಧನೆ ಮೆಚ್ಚಿ 59ನೇ ನ್ಯಾಷನಲ್ ಫಿಲ್ಮ್ ಅವಾರ್ಡ್ಸ್ನಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, 2004ರಲ್ಲಿ ಪದ್ಮಭೂಷಣ ಮತ್ತು 1998ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.