ಪಂಜಾಬ್: ಕೊರೊನಾ ವೈರಸ್ ಹಾಗೂ ಲಾಕ್ಡೌನ್ ಹಿನ್ನೆಲೆ ಸಂಕಷ್ಟದಲ್ಲಿರುವ ದುರ್ಬಲ ಜನರಿಗೆ ಬಾಲಿವುಡ್ ನಟ ಸೋನು ಸೂದ್ ಇ- ರಿಕ್ಷಾವನ್ನು ವಿತರಿಸಿದರು.
ಕೋವಿಡ್-19 ನಿಂದಾಗಿ ಅನೇಕರು ಸಂಕಷ್ಟಕ್ಕೆ ಸಿಲುಕಿದ್ದು, ಪಂಜಾಬ್‌ನ ಮೊಗಾದಲ್ಲಿ 8 ಜನರಿಗೆ ಇ -ರಿಕ್ಷಾಗಳನ್ನು ಹಸ್ತಾಂತರಿಸಿದರು. ನಂತರ ಮಾತನಾಡಿದ ಅವರು, ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಉದ್ದೇಶದಿಂದ ಸಣ್ಣ ಕೊಡುಗೆಯನ್ನು ನೀಡಿದ್ದೇನೆ. ಮೊಗಾದಿಂದ ಈ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ. ಇ- ರಿಕ್ಷಾ ವಿತರಿಸಿದಾಗ ಸಂಕಷ್ಟದಲ್ಲಿರುವವರ ಮೊಗದಲ್ಲಿ ಮಂದಹಾಸ ಮೂಡಿದೆ. ಅವರ ಸಂತೋಷದ ಮುಖಗಳನ್ನು ನೋಡಿ ನನಗೆ ಸಂತೋಷವಾಗಿದೆ. ಬೇರೆ ಏನನ್ನೋ ನೀಡುವುದಕ್ಕಿಂತ ಉದ್ಯೋಗ ಒದಗಿಸುವುದು ಪ್ರಮುಖವಾದದ್ದು. ಈ ಮೂಲಕ ಅವರು ಸ್ವಾವಲಂಬಿ ಬದುಕು ಕಟ್ಟಿಕೊಂಡು ತಮ್ಮ ಕಾಲುಗಳ ಮೇಲೆ ನಿಲ್ಲಲು ಸಹಾಯ ಮಾಡುತ್ತದೆ ಎಂಬ ವಿಶ್ವಾಸವನ್ನು ಸೂದ್ ವ್ಯಕ್ತಪಡಿಸಿದರು.
ಇನ್ನು ರೈತರ ಪ್ರತಿಭಟನೆಯ ಕುರಿತು ಪ್ರತಿಕ್ರಿಯಿಸಿದ ಸೋನು ಸೂದ್, ಸಮಸ್ಯೆಗೆ ಸೂಕ್ತವಾದ ಪರಿಹಾರವನ್ನು ಕಂಡುಹಿಡಿಯಬೇಕು. ರೈತರು ಮತ್ತು ಸರ್ಕಾರ ಪರಸ್ಪರ ಕುಳಿತು ಚರ್ಚಿಸಿ ಒಂದು ತೀರ್ಮಾನಕ್ಕೆ ಬರಬೇಕು ಎಂದರು.
'ದಬಾಂಗ್', 'ಜೋಧಾ ಅಕ್ಬರ್' ಮತ್ತು 'ಸಿಂಬಾ' ಚಿತ್ರಗಳ ಮೂಲಕ ಹೆಸರಾಗಿರುವ ಸೋನು ಸೂದ್, ಕೊರೊನಾ ವೈರಸ್ ಕಾಣಿಸಿಕೊಂಡ ನಂತರ ಲಾಕ್ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರು ತಮ್ಮೂರಿಗೆ ಮರಳಲು ಬಸ್ ಗಳ ವ್ಯವಸ್ಥೆ ಮಾಡಿದ್ದರು.