ಹೈದರಾಬಾದ್: ಸೋನು ಸೂದ್, ಇತ್ತೀಚೆಗೆ ಎಲ್ಲರ ಬಾಯಲ್ಲೂ ಈ ರಿಯಲ್ ಹೀರೋ ಹೆಸರೇ ಕೇಳಿಬರುತ್ತಿದೆ. ಲಾಕ್ಡೌನ್ ದಿನಗಳಲ್ಲಿ ಅವರು ಮಾಡಿರುವ ಜನಸೇವೆಯೇ ಇದಕ್ಕೆ ಕಾರಣ. ಚಿತ್ರೀಕರಣವೊಂದಕ್ಕಾಗಿ ಹೈದರಾಬಾದ್ನಲ್ಲಿ ಉಳಿದುಕೊಂಡಿರುವ ಸೋನುಸೂದ್, ನಿನ್ನೆ ಹೈದರಾಬಾದ್ನಲ್ಲಿ ಇತ್ತೀಚೆಗೆ ಆರಂಭವಾದ ಪುಟ್ಟ ಫಾಸ್ಟ್ಫುಡ್ ಸೆಂಟರ್ಗೆ ಭೇಟಿ ನೀಡಿ ಮಾಲೀಕನಿಗೆ ಸರ್ಪ್ರೈಸ್ ನೀಡಿದ್ದಾರೆ.
ಲಾಕ್ಡೌನ್ ಸಮಯದಿಂದ ಸೋನುಸೂದ್ ಮಾಡಿರುವ ಸಮಾಜಸೇವೆ ಒಂದಲ್ಲಾ ಎರಡಲ್ಲ. ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದ ಇತ್ತೀಚೆಗೆ ಸೋನು ಸೂದ್ ತಮ್ಮ ಪತ್ನಿ ಸೋನಾಲಿ ಹೆಸರಿನಲ್ಲಿರುವ ಸುಮಾರು 10 ಕೋಟಿ ರೂಪಾಯಿ ಆಸ್ತಿಯನ್ನು ಅಡವಿಟ್ಟಿದ್ದರು. ಸೋನು ಸೂದ್ ಅವರ ಗುಣಕ್ಕೆ ಮಾರುಹೋದ ಹೈದರಾಬಾದ್ನ ಬೇಗಂಪೇಟೆ ನಿವಾಸಿ ಅನಿಲ್ ಎಂಬುವವರು ಇತ್ತೀಚೆಗೆ ತಾವು ಆರಂಭಿಸಿದ ಫಾಸ್ಟ್ಫುಡ್ ಸೆಂಟರ್ಗೆ ಸೋನುಸೂದ್ ಹೆಸರಿಟ್ಟಿದ್ದಾರೆ. ಈ ವಿಚಾರ ತಿಳಿದ ಸೋನುಸೂದ್ ಫಾಸ್ಟ್ಫುಡ್ ಸೆಂಟರ್ಗೆ ಭೇಟಿ ನೀಡಿ ಅಭಿಮಾನಿಗೆ ಸರ್ಪ್ರೈಸ್ ನೀಡಿದ್ದಲ್ಲದೆ ಅಲ್ಲಿ ಎಗ್ರೈಸ್ ತಿಂದು ಆದಷ್ಟು ಬೇಗ ಅನಿಲ್, ಇದೇ ಸ್ಥಳದಲ್ಲಿ ಫೈವ್ ಸ್ಟಾರ್ ಹೋಟೆಲ್ ಕಟ್ಟುವಂತಾಗಲಿ ಎಂದು ಹಾರೈಸಿದರು. ಸೋನು ಸೂದ್ ಬಂದಿರುವ ವಿಚಾರ ತಿಳಿದ ಅಭಿಮಾನಿಗಳು ಸ್ಥಳದಲ್ಲಿ ಜಮಾಯಿಸಿ ಅವರನ್ನು ಮಾತನಾಡಿಸಿ ಸೆಲ್ಫಿ ತೆಗೆಸಿಕೊಂಡು ಖುಷಿ ಪಟ್ಟರು. ಸೋನು ಸೂದ್ ಕೂಡಾ ನಗುತ್ತಲೇ ಎಲ್ಲರನ್ನೂ ಮಾತನಾಡಿಸಿ ಅವರೊಂದಿಗೆ ಪೋಟೋಗೆ ನಿಂತು ಸರಳತೆ ಮೆರೆದರು. ಅಷ್ಟೇ ಅಲ್ಲ, ಆದಷ್ಟು ಬೇಗ ಸಿದ್ದಿಪೇಟೆಗೂ ತೆರಳಿ ಅಲ್ಲಿನ ನಿವಾಸಿಗಳನ್ನು ಭೇಟಿ ಮಾಡುವುದಾಗಿ ಸೋನು ಸೂದ್ ಹೇಳಿದರು.
ಇದನ್ನೂ ಓದಿ: ಸೋನುಗೆ ದೇಗುಲ ಕಟ್ಟಿದ್ದು ಸಾರ್ಥಕ! ಅಪಘಾತದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ನೆರವಾದ ರಿಯಲ್ ಹೀರೊ
ಸೋನುಸೂದ್ ತಮ್ಮ ಫಾಸ್ಟ್ಫುಡ್ ಸೆಂಟರ್ಗೆ ಭೇಟಿ ನೀಡಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ ಫಾಸ್ಟ್ ಫುಡ್ ಸೆಂಟರ್ ಮಾಲೀಕ ಅನಿಲ್, ನಾನು ಪ್ರತಿದಿನ ಅವರ ಹೆಸರು ಕೇಳುತ್ತಿದ್ದೇವೆ ಹೊರತು ಅವರನ್ನು ನೋಡುತ್ತೇನೆ ಎಂದು ಕನಸಲ್ಲೂ ಅಂದುಕೊಂಡಿರಲಿಲ್ಲ. ಆದರೆ ಅವರು ನಮ್ಮ ಫುಡ್ ಸೆಂಟರ್ಗೆ ಬಂದು ನಾನು ಮಾಡಿದ ಎಗ್ರೈಸ್ ರುಚಿ ನೋಡಿ ನನಗೆ ಶುಭ ಹಾರೈಸಿದ್ದು ಬಹಳ ಖುಷಿಯಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.