ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಕಾರ್ಯಗಳ ಮೂಲಕವೇ ಜನಮಾನಸದಲ್ಲಿ ಜಾಗ ಪಡೆದಿರುವ ಬಾಲಿವುಡ್ ನಟ ಸೋನು ಸೂದ್ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಈ ವಿಶೇಷ ದಿನದಂದು, ಅವರು ತಮ್ಮ ಹುಟ್ಟುಹಬ್ಬವನ್ನು ಸಹಚರರೊಂದಿಗೆ ಕೇಕ್ ಕತ್ತರಿಸುವ ಮೂಲಕ ಆಚರಿಸಿದ್ದಾರೆ. 48ನೇ ವರ್ಷಕ್ಕೆ ಕಾಲಿಟ್ಟ ರಿಯಲ್ ಹೀರೋಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ಶುಭ ಕೋರಿದ್ದಾರೆ.

ಸೋನು ಸೂದ್ ಜುಲೈ 30, 1973 ರಂದು ಪಂಜಾಬ್‌ನ ಮೊಗಾದಲ್ಲಿ ಜನಿಸಿದರು. ಅವರ ತಂದೆ 'ಬಾಂಬೆ ಕ್ಲಾತ್ ಹೌಸ್' ಎಂಬ ಹೆಸರಿನ ಬಟ್ಟೆ ಅಂಗಡಿಯನ್ನು ನಡೆಸುತ್ತಿದ್ದರು. ಇನ್ನು ಸೋನು ನಾಗ್ಪುರದಲ್ಲಿ ಎಲೆಕ್ಟ್ರಾನಿಕ್ಸ್‌ನಲ್ಲಿ ಇಂಜಿನಿಯರಿಂಗ್ ಪದವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಿನಿರಂಗಕ್ಕೆ ಕಾಲಿಡಬೇಕು ಎಂದು ಮುಂಬೈಗೆ ಆಗಮಿಸಿ ಅವರು ಅನೇಕ ಕಷ್ಟಗಳನ್ನು ಎದುರಿಸಿ ಬಳಿಕ ನಟನಾ ಲೋಕಕ್ಕೆ 1999ರಲ್ಲಿ ಪ್ರವೇಶಿಸಿದರು.
ಸೋನು ಸಿನಿ ಜರ್ನಿ ನೋಡುವುದಾದರೆ 1999ರಲ್ಲಿ ತಮಿಳು ಚಿತ್ರ ‘ಕಲ್ಲಾಳಾಗರ್’ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಆ ಬಳಿಕ 2001 ರಲ್ಲಿ ‘ಶಹೀದ್-ಇ-ಅಜಮ್’ ಚಿತ್ರದ ಮೂಲಕ ಬಾಲಿವುಡ್ಗೆ ಕಾಲಿಟ್ಟ ಅವರು ಬ್ಲಾಕ್ಬಸ್ಟರ್ ಸಿನಿಮಾ ಮೂಲಕ ಜನಮೆಚ್ಚುಗೆ ಪಡೆದರು. ಈ ನಟ ಬಾಲಿವುಡ್ ಮತ್ತು ಟಾಲಿವುಡ್‌ನಲ್ಲಿ ಮಾತ್ರವಲ್ಲದೇ ಚೀನಾದ ಉದ್ಯಮದಲ್ಲಿ ತನ್ನ ಹೆಸರನ್ನು ಗಳಿಸಿದ್ದಾರೆ.

ಸೋನು ಜೊತೆಗೆ ಭಾರತೀಯ ನಟಿಯರಾದ ದಿಶಾ ಪಟಾನಿ ಮತ್ತು ಅಮಿರಾ ದಸ್ತೂರ್ 2017 ರಲ್ಲಿ ಜಾಕಿ ಚಾನ್ ಅವರ ಕುಂಗ್ ಫೂ ಯೋಗ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಹುಮುಖ ಪ್ರತಿಭೆಯಾದ ಸೋನು ಹಿಂದಿ, ಇಂಗ್ಲಿಷ್, ತಮಿಳು, ಕನ್ನಡ ಮತ್ತು ಪಂಜಾಬಿ ಒಟ್ಟು 5 ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಜುಲೈ 2016 ರಲ್ಲಿ, ಅವರು ತಮ್ಮದೇ ಆದ ಶಕ್ತಿ ಸಾಗರ್ ಪ್ರೊಡಕ್ಷನ್ಸ್ ಅನ್ನು ಪ್ರಾರಂಭಿಸಿದರು. ಇದನ್ನು ಅವರ ತಂದೆ ಶಕ್ತಿ ಸಾಗರ್ ಸೂದ್ ಅವರ ಹೆಸರಿನಲ್ಲಿ ನಿರ್ಮಿಸಲಾಗಿದೆ. ಸದ್ಯ ಸೋನು ಅವರು ಬಾಲಿವುಡ್ನ ಮುಂಬರುವ ಸಿನಿಮಾ 'ಪೃಥ್ವಿರಾಜ್'ನಲ್ಲಿ ಬಣ್ಣ ಹಚ್ಚಿದ್ದಾರೆ.