ಬೆಂಗಳೂರು: ರಾಧಾರಮಣ ಖ್ಯಾತಿಯ ಶ್ವೇತಾ ಪ್ರಸಾದ್ ಚಿತ್ರರಂಗದ ಸ್ನೇಹಿತರೊಂದಿಗೆ ತೆಗೆಸಿಕೊಂಡಿದ್ದ ಫೋಟೋ ನೋಡಿ ಸ್ಯಾಂಡಲ್‌ವುಡ್ ಡ್ರಗ್ ಮಾಫಿಯಾದೊಂದಿಗೆ ಸಂಬಂಧ ಇದೆ ಎಂದು ಬಿಂಬಿಸಿದ್ದ ಮಾಧ್ಯಮದವರಿಗೆ ಖಡಕ್ ಸಂದೇಶವನ್ನು ರವಾನಿಸಿದ್ದಾರೆ.
ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಬರೆದಿರುವ ಶ್ವೇತಾ "ನನ್ನ ಒಂದು ಗ್ರೂಪ್ ಫೋಟೋ ಮಾಧ್ಯಮದಲ್ಲಿ ಹರಿದಾಡುತ್ತಿದೆ ಎಂದು ತಿಳಿದಾಗ ನಾನು ನಕ್ಕುಬಿಟ್ಟೆ. ಆದರೆ ಅವರು ಕೆಟ್ಟ ಪದಗಳನ್ನು ಉಪಯೋಗಿಸುತ್ತಿದ್ದು ನನಗೆ ಕಿರಿಕಿರಿ ಉಂಟುಮಾಡಿತು. ಆದರೆ ನಾನು ನಿಯಂತ್ರಿಸಿಕೊಂಡೆ. ಯಾರೂ ಪರಿಪೂರ್ಣರಲ್ಲ ಹಾಗೂ ನಮ್ಮ ಅಪೂರ್ಣತೆಗಳನ್ನು ಆಳವಾಗಿ ಅಗೆದು ಎತ್ತಿ ಹಿಡಿಯಲು ಪ್ರಯತ್ನಿಸುತ್ತಿವೆ. ನಾನು ಪರ್ಫೆಕ್ಟ್ ಅಲ್ಲದಿರಬಹುದು. ಆದರೆ ಇಲ್ಲೀಗಲ್ ಕೆಲಸ ಮಾಡಿಲ್ಲ" ಎಂದು ಹೇಳಿಕೊಂಡಿದ್ದಾರೆ.
"ಸತ್ಯ ತಿಳಿಯದೆ ಸುದ್ದಿ ಪ್ರಸಾರ ಮಾಡಿದವರು ಜವಾಬ್ದಾರಿಯಿಂದ ನಡೆದುಕೊಳ್ಳಲಿ. ಹೆಸರು ಹಾಳುಮಾಡಬೇಡಿ. ಸತ್ಯವನ್ನು ತಿಳಿದುಕೊಳ್ಳಲು ಪ್ರಯತ್ನಿಸಿದ ಕೆಲವು ಮಾಧ್ಯಮಗಳಿಗೆ ಇದು ಕಷ್ಟಪಟ್ಟು ಗಳಿಸಿದ ಗೌರವವಾಗಿದೆ. ಮೌನ ಯಾರೊಬ್ಬರ ವೀಕ್‌ನೆಸ್ ಅಲ್ಲ. ಚಂಡಮಾರುತ ಶಾಂತವಾಗುವವರೆಗೂ ದೃಢವಾಗಿ ಇರುವುದು ಧೈರ್ಯ. ಕೆಲವು ವಿಷಯಗಳಿಗೆ ಪ್ರತಿಕ್ರಿಯೆ ಅಗತ್ಯವಿರುವುದಿಲ್ಲ ಎಂದಿದ್ದಾರೆ.
ಆದರೆ ಸರಿಯಾಗಿ ಜವಾಬು ನೀಡಬೇಕು. ಈ ಜಗತ್ತು ಒಳ್ಳೆಯದಾಗಿದೆ. ನನ್ನಂತಹ ಒಳ್ಳೆಯ ಜನರು ಇದನ್ನು ಇನ್ನೂ ಒಳ್ಳೆಯದಾಗಿ ಮಾಡುತ್ತಾರೆ ಎಂದು ಅನುಮಾನಪಡುವವರಿಗೆ ಹೇಳುವೆ. ನೀವು ಒಳ್ಳೆಯವರಾಗಿದ್ದರೆ ನಿಮ್ಮಲ್ಲಿ ವಿಶ್ವಾಸ ಇರುತ್ತದೆ. ನನ್ನ ಮೇಲೆ ನಂಬಿಕೆ ಇಟ್ಟವರಿಗೆ ನನ್ನ ಪ್ರೀತಿ ಇರುತ್ತದೆ" ಎಂದಿದ್ದಾರೆ ಶ್ವೇತಾ.
ರಾಧಾರಮಣದಲ್ಲಿ ಮಿಂಚಿದ್ದ ಶ್ವೇತಾ ಸದ್ಯ ನಟನೆಯಿಂದ ದೂರವಿದ್ದು ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ನೈಸರ್ಗಿಕ ಹಾಗೂ ಸಾವಯವ ಉತ್ಪನ್ನಗಳ ವಹಿವಾಟು ಆರಂಭಿಸಿದ್ದಾರೆ.