2018ರಲ್ಲಿ ಗುಳ್ಟು ಎಂಬ ಕನ್ನಡ ಸಿನಿಮಾ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿತ್ತು. ಈ ಚಿತ್ರ ಹಿಟ್ ಆದ ನಂತ್ರ ಚಿತ್ರದ ನಾಯಕ ನವೀನ್ ಕೂಡ ಗುಳ್ಟು ಸಿನಿಮಾದ ಹೀರೋ ಅಂತಾ ಗುರುತಿಸಿಕೊಂಡ್ರು. ಈಗ ಬಹಳ ದಿನಗಳ ನಂತರ ನವೀನ್ ಶಂಕರ್ ಮತ್ತೊಂದು ವಿಭಿನ್ನ ಸಿನಿಮಾ ಮಾಡಲು ಮುಂದಾಗಿದ್ದಾರೆ.
"ನೋಡಿದವರು ಏನಂತಾರೆ" ಅಂತಾ ಟೈಟಲ್ ಇಟ್ಟು ಮತ್ತೆ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ಅನ್ನು ನಟ ಶ್ರೀಮುರಳಿ ಅನಾವರಣಗೊಳಿಸಿದ್ದಾರೆ. ಶ್ರೀಮುರಳಿಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಮತ್ತು ಅಯೋಗ್ಯ ಚಿತ್ರದ ನಿರ್ದೇಶಕ ಮಹೇಶ್ ಸಾಥ್ ನೀಡಿದ್ದು, ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ.
ಈ ಬಗ್ಗೆ ಮಾತನಾಡಿರುವ ಶ್ರೀಮುರಳಿ, ಗುಳ್ಟು ಸಿನಿಮಾವನ್ನ ನೋಡಿ ಮೆಚ್ಚಿದ್ದೆ. ಈಗ ನವೀನ್ ಶಂಕರ್ ನಟನೆಯ 'ನೋಡಿದವರು ಏನಂತಾರ' ಪೋಸ್ಟರ್ ರಿಲೀಸ್ ಮಾಡುತ್ತಿರುವುದು ಖುಷಿಯಾಗುತ್ತಿದೆ ಎಂದಿದ್ದಾರೆ. ನವೀನ್ ಶಂಕರ್ ಜೋಡಿಯಾಗಿ, ಅಪೂರ್ವ ಭಾರದ್ವಾಜ್ ಜೊತೆಯಾಗಿದ್ದಾರೆ. ಕಿರುತೆರೆ ಹಾಗೂ ಕಲಾತ್ಮಕ ಚಿತ್ರದಲ್ಲಿ ನಟಿಸಿರುವ ಅಪೂರ್ವ ಭಾರದ್ವಾಜ್ಗೆ ಇದು ಮೊದಲ ಕಮರ್ಷಿಯಲ್ ಸಿನಿಮಾ.
ಜಗತ್ತಿರೋದೇ ಹೀಗೆ… ಎಲ್ಲ ವಿಚಾರಕ್ಕೂ, ಎಲ್ಲ ಸಮಯದಲ್ಲೂ ವಿಪರೀತ ಭಯ ಹುಟ್ಟಿಸುತ್ತದೆ. ಸಾಕಷ್ಟು ಸಲ ಜೊತೆಗೆ ಬದುಕುವವರೂ ಒಂದಲ್ಲಾ ಒಂದು ಬಗೆಯಲ್ಲಿ ಗಾಬರಿಗೊಳಿಸುತ್ತಾರೆ. ಯಾಂತ್ರಿಕ ಬದುಕಿನಲ್ಲಿ ಭಾವನೆಗಳಿಗೆ ಬೆಲೆ ಸಿಗೋದಿಲ್ಲ. ಒಳಮನಸ್ಸಿನ ಸಂಕಟಗಳು ಯಾರಿಗೂ ಅರ್ಥವಾಗೋದಿಲ್ಲ. ಎಲ್ಲವನ್ನೂ ಚಿಂತಿಸುತ್ತಾ ಕೂತರೆ ಎದೆಯೊಳಗಿನ ಭಾವುಕತೆ ಉಸಿರುಗಟ್ಟಿಸುತ್ತದೆ ಎಂಬ ಕಥೆಯನ್ನ ಈ ಚಿತ್ರ ಆಧರಿಸಿದೆ.
ನಿರ್ದೇಶಕ ಕುಲದೀಪ್ ಕರಿಯಪ್ಪ ಹೇಳುವ ಹಾಗೇ ಎರಡೂವರೆ ವರ್ಷಗಳ ಕಾಲ ಕೂತು ಬರೆದು ಆರಂಭಿಸಿರುವ ಚಿತ್ರವಿದು. ಬರೆಯುತ್ತಾ ಬರೆಯುತ್ತಾ ಬೇರೆಯದ್ದೇ ಆಯಾಮ ಪಡೆಯುತ್ತಾ ಹೋಯಿತು. ನಟ ನವೀನ್ ಶಂಕರ್ ಅವರಿಗೆ ಗುಳ್ಟು ಚಿತ್ರದ ಪಾತ್ರಕ್ಕೂ ಈ ಚಿತ್ರದ ಕ್ಯಾರೆಕ್ಟರಿಗೂ ಸಂಪೂರ್ಣ ಕಾಂಟ್ರಾಸ್ಟ್ ಇದೆ. ಆದರೆ, ಅಲ್ಲಿನಂತೆ ಈ ಚಿತ್ರದ ಪಾತ್ರದಲ್ಲೂ ಕೂಡಾ ಸಂಘರ್ಷದ ಗುಣವಿದೆ ಅಂತಾರೆ ನಿರ್ದೇಶಕರು.
ನವೀನ್, ಅಪೂರ್ವ ಭಾರದ್ವಾಜ್ ಅಲ್ಲದೇ ಹೊಸ ಕಲಾವಿದೆ ರಮ್ಯ ಕೃಷ್ಣ ಮತ್ತು ಇತರರ ತಾರಾಗಣ ಈ ಚಿತ್ರದಲ್ಲಿದೆ. ಈಗಗಲೇ ಚಿಕ್ಕಮಗಳೂರು ಮತ್ತು ಬೆಂಗಳೂರಿನಲ್ಲಿ ಎರಡು ಹಂತದ ಚಿತ್ರೀಕರಣ ಮುಗಿದಿದ್ದು, ಇನ್ನುಳಿದ ಭಾಗಗಳನ್ನು ಗೋಕರ್ಣ, ಕೊಡಗು, ಹಂಪಿ, ಮುಂಬೈ ಮುಂತಾದೆಡೆ ಚಿತ್ರೀಕರಿಸಲಾಗುತ್ತಿದೆ.
ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಎಲ್ಲವನ್ನೂ ಜಯಂತ್ ಕಾಯ್ಕಿಣಿ ಬರೆಯುತ್ತಿದ್ದಾರೆ. ಸಕ್ರೆಡ್ ಗೇಮ್ಸ್ನಂಥಾ ವೆಬ್ ಸಿರೀಸ್ಗೆ ಕೆಲಸ ಮಾಡಿದ್ದ, ಮುಂಬೈ ಉತ್ಸವ್ ಸ್ಟುಡಿಯೋದ ಮಯೂರೇಶ್ ಅಧಿಕಾರಿ ಸಂಗೀತ ಸಂಯೋಜನೆಯಿದೆ. ಉಗ್ರಂ, ಮದಗಜ, ಅಮ್ಮಚ್ಚಿಯೆಂಬ ನೆನಪು ಮುಂತಾದ ಸಿನಿಮಾಗಳಿಗೆ ಸಹಾಯಕರಾಗಿದ್ದ ಅಶ್ವಿನ್ ಕೆನ್ನೆಡಿ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ.