ಶಿವಮೊಗ್ಗ : ನಗರದ ಕೋಟೆ ಸೀತಾರಾಂಜನೇಯ ದೇವಸ್ಥಾನದಲ್ಲಿ ಮುತ್ತು ನಿರ್ದೇಶನದ ದುಶ್ಮನ್ ಚಿತ್ರದ ಶೂಟಿಂಗ್‌ನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಪ್ರಾರಂಭಿಸಲಾಯಿತು.
ಮಾಜಿ ಜಿಪಂ ಅಧ್ಯಕ್ಷ ಕಲ್ಗೋಡು ರತ್ನಾಕರ್ ಬೋರ್ಡ್ ಕ್ಲಾಪ್ ಮಾಡುವ ಮೂಲಕ ಚಿತ್ರ ತಂಡಕ್ಕೆ ಶುಭ ಕೋರಿದರು. ಡ್ರಗ್ಸ್, ಗಾಂಜಾ, ರೌಡಿಸಂ ಕಥೆ ಒಳಗೊಂಡ, ಸಮಾಜಕ್ಕೆ ಉತ್ತಮ ಸಂದೇಶ ಸಾರುವ ನಿಟ್ಟಿನಲ್ಲಿ ದುಶ್ಮನ್ ಚಿತ್ರ ನಿರ್ಮಾಣವಾಗುತ್ತಿದೆ. ಯುವ ಜನಾಂಗ ಮಾದಕ ವಸ್ತುಗಳಿಂದ ದೂರವಿರಬೇಕು ಎಂಬ ಸಂದೇಶವನ್ನು ಈ ದುಶ್ಮನ್ ಚಿತ್ರ ಹೇಳಲು ಹೊರಟಿದೆ.
ಈ ಚಿತ್ರದಲ್ಲಿ ಪ್ರೇಮಕಥೆ ಜೊತೆಗೆ ಐದು ಹಾಡುಗಳಿವೆ. ನಾಲ್ಕು ಫೈಟ್ ಇವೆ. ಚಿತ್ರದ ಹಾಡುಗಳನ್ನು ವಿಜಯ್ ಪ್ರಕಾಶ್ ಸೇರಿ ಹಲವು ಗಾಯಕರು ಹಾಡಲಿದ್ದಾರೆ. ಸಾಮಾಜಿಕ ಜವಾಬ್ದಾರಿ ಮೂಡಿಸುವ ಚಿತ್ರ ಇದಾಗಿದ್ದು, ಚಿತ್ರದಲ್ಲಿ ಸಾಧು ಕೋಕಿಲ, ರಂಗಾಯಣ ರಘು, ಶೋಭರಾಜ್ ಸೇರಿ ಹಲವು ಖ್ಯಾತ ನಟರು ಅಭಿನಯಿಸಲಿದ್ದಾರೆ.
ನಾಯಕ ನಟರಾಗಿ ಪಾದಾರ್ಪಣೆ ಮಾಡುತ್ತಿರುವಂತಹ ಜೀವನ್ ಕುಮಾರ್ ಹಾಗೂ ನಾಯಕಿಯಾಗಿ ಜನನಿ ನಟಿಸಲಿದ್ದಾರೆ. ಶಿವಮೊಗ್ಗದ ನಾಗರಾಜ್ ಇದಕ್ಕೆ ಬಂಡವಾಳ ಹೂಡಿದ್ದಾರೆ. ಸಂಗೀತ ನಿರ್ದೇಶನ ಶ್ರೀಹರ್ಷ ಮಾಡಿದ್ದಾರೆ. ಇದು ಬಹಳ ನಿರೀಕ್ಷಿತ ಚಿತ್ರವಾಗಿದೆ. ಚಿತ್ರೀಕರಣವನ್ನು ಶಿವಮೊಗ್ಗ, ಮೈಸೂರಿನಲ್ಲಿ ಮಾಡಲು ನಿರ್ಧರಿಸಲಾಗಿದೆ ಎಂದು ನಿರ್ದೇಶಕ ಮುತ್ತು ತಿಳಿಸಿದರು.