ಒಂದು ಸಿನಿಮಾದಲ್ಲಿ ಒಂದೇ ಕುಟುಂಬದ ಇಬ್ಬರು ಅಥವಾ ಮೂವರು ಕೆಲಸ ಮಾಡಿರುವುದನ್ನು ನೀವು ನೋಡಿರಬಹುದು. ಆದರೆ ಮೂರು ಕುಟುಂಬದ ಇಬ್ಬಿಬ್ಬರು ಕಲಾವಿದರು ಜೊತೆಯಾಗಿ ಕೆಲಸ ಮಾಡಿರುವುದು ಇದೇ ಮೊದಲು ಎನ್ನಬಹುದು. ಮಾರ್ಚ್ 12 ರಂದು 'ಶಿವಾರ್ಜುನ' ಸಿನಿಮಾ ಬಿಡುಗಡೆ ಆಗಲಿದೆ.
ಈ ಚಿತ್ರದ ನಿರ್ಮಾಪಕರ ಹೆಸರು ಕೂಡಾ ಶಿವಾರ್ಜುನ. ವಿಶೇಷ ಎಂದರೆ ಚಿತ್ರದ ನಿರ್ದೇಶಕನ ಹೆಸರು ಕೂಡಾ ಶಿವ ತೇಜಸ್. ಕಳೆದ ಶಿವರಾತ್ರಿ ಹಬ್ಬದಂದು ಚಿತ್ರದ ಧ್ವನಿ ಸುರಳಿ ಬಿಡುಗಡೆ ಮಾಡಲಾಯಿತು. ಇನ್ನು ಈ ಚಿತ್ರದಲ್ಲಿ ಕೆಲಸ ಮಾಡಿರುವ ಕುಟುಂಬದ ಸದಸ್ಯರ ವಿಚಾರಕ್ಕೆ ಬರುವುದಾದರೆ, ಚಿತ್ರದಲ್ಲಿ ಹಿರಿಯ ನಟಿ, ರಾಷ್ಟ್ರಪ್ರಶಸ್ತಿ ವಿಜೇತೆ ತಾರಾ ಅನುರಾಧ ತಾಯಿ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ನಾಯಕನ ಬಾಲ್ಯದ ಪಾತ್ರಲ್ಲಿ ತಾರಾ ಪುತ್ರ ಶ್ರೀಕೃಷ್ಣ ನಟಿಸಿದ್ದಾರೆ. ಇದು ಶ್ರೀ ಕೃಷ್ಣ ಅಭಿನಯದ ಮೊದಲ ಸಿನಿಮಾ. ಕುಟುಂಬದ ವಿಚಾರಕ್ಕೆ ಬಂದರೆ ಹಿರಿಯ ನಟಿ ರಾಷ್ಟ್ರ ಪ್ರಶಸ್ತಿ ವಿಜೇತ ತಾರಾ ಅನುರಾಧ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅವರ ಮಗ ಶ್ರೀಕೃಷ್ಣ ಅಭಿನಯದ ಮೊದಲ ಸಿನಿಮಾ. ಚಿತ್ರಕ್ಕೆ ತಾರಾ ಪತಿ ಹೆಚ್. ಸಿ. ವೇಣು ಛಾಯಾಗ್ರಹಣ ಮಾಡಿದ್ದಾರೆ.
ಸಿನಿಮಾ ನಾಯಕ ಚಿರಂಜೀವಿ ಸರ್ಜಾ ಬಾಲ್ಯದಿಂದ ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದ ಶಿವಾರ್ಜುನ್ (ಈಗಿನ ನಿರ್ಮಾಪಕ) ಜೊತೆಯಲ್ಲಿ ಬೆಳೆದವರು. ಚಿರಂಜೀವಿ ಸರ್ಜಾ ಸೋದರ ಮಾವ ಅರ್ಜುನ್ ಸರ್ಜಾ ಅವರ ಬಹುತೇಕ ಸಿನಿಮಾಗಳಿಗೆ ಶಿವಾರ್ಜುನ್ ಪ್ರೊಡಕ್ಷನ್ ಮ್ಯಾನೇಜ್ ಆಗಿ ಕೆಲಸ ಮಾಡಿದ್ದರು. ಈ ಬಾಂಧವ್ಯದಿಂದಲೇ ಚಿರಂಜೀವಿ ಸರ್ಜಾ ಜೊತೆ ಸೇರಿ ಶಿವಾರ್ಜುನ್ ಕೆಲಸ ಮಾಡುತ್ತಿದ್ದಾರೆ. ವಿಶೇಷ ಎಂದರೆ ಚಿರಂಜೀವಿ ಪತ್ನಿ ಮೇಘನಾ ರಾಜ್ ಈ ಚಿತ್ರದಲ್ಲಿ ಒಂದು ಹಾಡು ಹೇಳಿದ್ದಾರೆ. ಈ ಚಿತ್ರದ ಟೀಸರನ್ನು ಧ್ರುವಾ ಸರ್ಜಾ ಬಿಡುಗಡೆ ಮಾಡಿದ್ದಾರೆ.
ಇನ್ನು ಚಿತ್ರದ ಸಂಗೀತ ನಿರ್ದೇಶಕ ಸಾಧು ಕೋಕಿಲ ಎರಡು ಹಾಡುಗಳಿಗೆ ರಾಗ ಸಂಯೋಜನೆ ಮಾಡಿರುವುದಲ್ಲದೆ, ಚಿತ್ರದಲ್ಲಿ ಆ್ಯಕ್ಟಿಂಗ್ ಕೂಡಾ ಮಾಡಿದ್ದಾರೆ. ಇವರೊಂದಿಗೆ ಸಾಧು ಕೋಕಿಲ ಪುತ್ರ ಸುರಾಗ್ ಒಂದು ಹಾಡಿಗೆ ಹಿನ್ನೆಲೆ ಸಂಗೀತ ಒದಗಿಸಿರುವುದು ಈ ಚಿತ್ರದ ವಿಶೇಷ ಎನ್ನಬಹುದು.