ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಅಭಿನಯದ 'ಕವಚ' ಸಿನಿಮಾ ಕಳೆದ ವಾರ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಇದೀಗ ಯಶಸ್ವಿ ಎರಡನೇ ವಾರಕ್ಕೆ ಎಂಟ್ರಿ ಕೊಟ್ಟಿದೆ.
ಕ್ಲಾಸ್ ಹಾಗೂ ಮಾಸ್ ಆಡಿಯನ್ಸ್ಗಳನ್ನು ಥಿಯೇಟರ್ಗಳಿಗೆ ಸೆಳೆಯುವಲ್ಲಿ 'ಕವಚ' ಚಿತ್ರ ಯಶಸ್ವಿಯಾಗಿದೆ. ಸಿನಿಮಾದ ಯಶಸ್ಸಿಗೆ ಚಿತ್ರತಂಡ ಫುಲ್ ಖುಷ್ ಆಗಿದ್ದು, ನಿನ್ನೆ ಪತ್ರಿಕಾಗೋಷ್ಠಿ ಕರೆದು ಮಾಧ್ಯಮಗಳ ಜೊತೆ ಸಂತೋಷವನ್ನು ಶೇರ್ ಮಾಡಿಕೊಂಡಿದೆ. ಎಲೆಕ್ಷನ್‌ನ ಕಾವು, ಐಪಿಎಲ್ ಅಬ್ಬರದ ನಡುವೆಯೂ 'ಕವಚ' ಸಿನಿಮಾ ಕಲೆಕ್ಷನ್ ವಿಚಾರದಲ್ಲಿ ನಿಧಾನವಾಗಿ ಚೇತರಿಸಿಕೊಂಡಿದ್ದು, ನಮ್ಮನ್ನು ಸೇಫ್ ಝೋನ್ಗೆ ಕರೆದೊಯ್ದಿದೆ ಎಂದು ನಿರ್ಮಾಪಕರು ತಿಳಿಸಿದ್ರು.
ಇನ್ನು ಈ ಸಿನಿಮಾ ನನ್ನ ವೃತ್ತಿ ಜೀವನದಲ್ಲಿ ಬಹಳ ವಿಶೇಷವಾದದ್ದು. ಪ್ರಯೋಗಾತ್ಮಾಕ ಚಿತ್ರಗಳನ್ನು ಕನ್ನಡ ಸಿನಿ ಪ್ರಿಯರು ಯಾವತ್ತೂ ಕೈ ಬಿಟ್ಟಿಲ್ಲ. ಅದೇ ರೀತಿ ಈ ಚಿತ್ರಕ್ಕೂ ಅಭಿಮಾನಿಗಳು 'ಕವಚ'ವಾಗಿದ್ದಾರೆ. 'ರೆಕ್ಕೆಯ ಕುದುರೆ ಏರಿ ಬೆಳ್ಳಿ ಮೋಡವ ದಾಟಿ ಬರುವ ನಿನ್ನ ಅಪ್ಪಯ್ಯ' ಹಾಡನ್ನು ಜನರು ಟಿಕ್ಟಾಕ್ ಮಾಡಿ ನನಗೆ ಮೆಸೇಜ್ ಮಾಡಿದ್ದಾರೆ. ಇದು ನನಗೆ ಬಹಳ ಖುಷಿ ನೀಡಿದೆ ಎಂದು ಶಿವಣ್ಣ ಖುಷಿ ಹಂಚಿಕೊಂಡರು.
ನೆಗೆಟಿವ್ ರೋಲ್ನಲ್ಲಿ ಮಿಂಚಿರುವ ವಸಿಷ್ಠ ಸಿಂಹ ಮಾತನಾಡಿ, 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ನಂತರ 'ಕವಚ' ಚಿತ್ರದಲ್ಲಿ ನನ್ನ ಪಾತ್ರ ಬಹಳ ವಿಶೇಷವಾಗಿದೆ. ಸಿನಿಮಾ ನೋಡಿದವರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ ಎಂದು ಖುಷಿ ವ್ಯಕ್ತಪಡಿಸಿದರು.
ಅಂತೂ ನಿರ್ದೇಶಕ ಜಿವಿಆರ್ ವಾಸು ಅವರು ಮೊದಲ ಚಿತ್ರದಲ್ಲಿ ವಿಭಿನ್ನ ಪ್ರಯೋಗ ಮಾಡಿ ಗೆದ್ದಿದ್ದಾರೆ ಎನ್ನಬಹುದು. ಎಂವಿವಿ ಸತ್ಯನಾರಾಯಣ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.