ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ಅಗಲಿ ಇಂದಿಗೆ 12ದಿನ ಪೂರ್ಣಗೊಂಡ ಹಿನ್ನೆಲೆ ನಗರದ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಅನ್ನಸಂತರ್ಪಣೆ ಕಾರ್ಯ ನೆರವೇರಿಸಲಾಗುತ್ತಿದೆ. 25 ಸಾವಿರಕ್ಕೂ ಅಧಿಕ ಅಭಿಮಾನಿಗಳಿಗೆ ಸಸ್ಯಾಹಾರ ಮತ್ತು ಮಾಂಸಹಾರ ಖಾದ್ಯ ಸಿದ್ಧಪಡಿಸಲಾಗಿದೆ. ಮೈದಾನದಲ್ಲಿ ಅಭಿಮಾನಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಸಕಲ ಸಿದ್ಧತೆ ಮಾಡಿಕೊಂಡು ಅನ್ನಸಂತರ್ಪಣೆ ನೆರವೇರಿಸಲಾಗುತ್ತಿದೆ.
ಮೈದಾನಕ್ಕೆ ಆಗಮಿಸಿದ ನಟ ಶಿವ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಹಾಗೂ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅಭಿಮಾನಿಗಳಿಗೆ ಊಟ ಬಡಿಸಿದರು.
ಅನ್ನ ಸಂತರ್ಪಣಾ ಕಾರ್ಯಕ್ಕೆ ಚಾಲನೆ ನೀಡಿದ ಶಿವಣ್ಣ ಅಪ್ಪು ಅಭಿಮಾನಿಗಳಿಗೆ ಊಟ ಬಡಿಸಿದರು, ಬಳಿಕ ಅಶ್ವಿನಿ ಪುನೀತ್ ರಾಜ್ಕುಮಾರ್ ಸಹ ಊಟ ಬಡಿಸಿ ಅಭಿಮಾನಿಗಳಿಗೆ ಕೈಮುಗಿದರು. ಅಭಿಮಾನಿಗಳಿಗಾಗಿ ವಿವಿಧ ಖಾದ್ಯಗಳ ಮಾಡಲಾಗಿತ್ತು.
ಈ ವೇಳೆ ಮಾತನಾಡಿದ ನಟ ಶಿವ ರಾಜ್ಕುಮಾರ್, ಈ ರೀತಿಯಾಗಿ ಸಂದರ್ಭ ಬಂದು ಊಟ ಹಾಕಬೇಕಾಯಿತಲ್ಲ ಎನ್ನುವ ನೋವಿದೆ. ಅವನ ಆಸೆ ಈ ರೀತಿ ನೆರವೇರಬೇಕು ಎನ್ನುವುದು ಆ ದೇವರ ಇಚ್ಛೆಯೋ ಏನೋ..? ಇದೊಂದು ಸ್ವಲ್ಪ ನಮಗೆ ನೋವಾಗುತ್ತಿದೆ ಎಂದರು.
ಅಭಿಮಾನಿಗಳಿಂದಲೇ ನಾವು ಹೀಗಿದ್ದೇವೆ. ಅವರಿಂದ ನಾವೇನು ಪಡೆದೆವೋ ಅದನ್ನ ಅವರಿಗೆ ಕೊಡುತ್ತಿದ್ದೇವೆ. ಅಪ್ಪು ಮಾಡಿದ ಸಾಮಾಜಿಕ ಕಾರ್ಯಗಳು ನಮಗೇ ತಿಳಿದಿರಲಿಲ್ಲ, ಅಪ್ಪು ನಮ್ಮಿಂದ ದೂರ ಆದಮೇಲೆ ಅವನು ಮಾಡಿರೋ ಸೇವೆಗಳು ಹೊರಗಡೆ ಬರುತ್ತಿವೆ. ನಮಗೆಲ್ಲಾ ತುಂಬಾನೆ ಹೆಮ್ಮೆ ಎನಿಸುತ್ತಿದೆ. ಆ ತರ ತಮ್ಮನ ಪಡಿಯೋಕೆ ನಾನು ಪುಣ್ಯ ಮಾಡಿದ್ದೆ ಎಂದರು.
ಬಳಿಕ ರಾಘವೇಂದ್ರ ರಾಜ್ಕುಮಾರ್ ಮಾತನಾಡಿ, ಅವನು ಎಲ್ಲರ ಮನಸಲ್ಲೂ ಇದ್ದಾನೆ, ಅವನಿಲ್ದೆ ಇಷ್ಟೊಂದು ಜನ ಬರಲು ಸಾಧ್ಯವಿಲ್ಲ. ಎಲ್ಲಾ ಅಭಿಮಾನಿಗಳಲ್ಲೂ ಅವನು ಇವತ್ತು ಕಾಣುತ್ತಿದ್ದಾನೆ. ಎಲ್ಲರೂ ಚೆನ್ನಾಗಿ ಊಟ ಮಾಡಿ. ನಿಮ್ಮ ಊರುಗಳಿಗೆ ಜೋಪಾನವಾಗಿ ಸೇರಿಕೊಳ್ಳಿ ಎಂದು ಮನವಿ ಮಾಡಿದರು.
ಇದಾದ ಬಳಿಕ ನಟ ಶಿವರಾಜ್ಕುಮಾರ್ ಲಯನ್ಸ್ ಬ್ಲಡ್ ಬ್ಯಾಂಕ್ಗೆ ರಕ್ತದಾನ ಮಾಡಿ ಪುನೀತ್ ಕಾರ್ಯವನ್ನ ಅರ್ಥಪೂರ್ಣವಾಗಿಸಿದರು.
ಇದನ್ನೂ ಓದಿ: ಅಭಿಮಾನಿ ದೇವರುಗಳಿಗೆ ಊಟ ಬಡಿಸಿದ ಶಿವಣ್ಣ, ಅಶ್ವಿನಿ ಪುನೀತ್ ರಾಜ್ಕುಮಾರ್