ವರನಟ ಡಾ.ರಾಜ್ಕುಮಾರ್ 92ನೇ ಹುಟ್ಟು ಹಬ್ಬವನ್ನ, ಅಭಿಮಾನಿಗಳು ಹಾಗೂ ರಾಜ್ ಕುಟುಂಬ, ಪ್ರತಿ ವರ್ಷ ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಆಚರಿಸುತ್ತಿದ್ದರು. ಆದ್ರೆ, ಕೊರೊನಾ ಕರ್ಫ್ಯೂ ಪರಿಣಾಮ ಈ ವರ್ಷ ಅದು ಸಾಧ್ಯವಾಗಿಲ್ಲ.
ಕಳೆದ ಎರಡು ವರ್ಷದಿಂದ ಕೊರೊನಾ ಕಾರಣ ಲಾಕ್‌ಡೌನ್ ಹೇರಲಾಗಿದೆ. ರಾಜ್ಕುಮಾರ್ ಸ್ಮಾರಕಕ್ಕೆ ಭೇಟಿ ನೀಡಲಾಗದೇ ಅಭಿಮಾನಿಗಳು, ತಾವು ಇರುವ ಜಾಗದಲ್ಲೇ ಪೂಜೆ ಮಾಡಿ ಅಣ್ಣಾವ್ರ ಹುಟ್ಟುಹಬ್ಬ ಆಚರಿಸ್ತಿದ್ದಾರೆ.
ಇತ್ತ ರಾಜ್ಕುಮಾರ್ ಪುತ್ರ, ನಟ ಶಿವರಾಜ್ಕುಮಾರ್, ಸ್ಮಾರಕದ ಹತ್ತಿರ ಬರೋದಿಕ್ಕೆ ಆಗದ ಕಾರಣ ತಾವು ಇದ್ದ ಜಾಗದಿಂದಲೇ ತಂದೆಯನ್ನ ಸ್ಮರಿಸಿದ್ದಾರೆ.
ಕನಕಪುರದ ಫಾರ್ಮ್ಹೌಸ್ನಲ್ಲಿರುವ ಶಿವಣ್ಣ ತಮ್ಮ ತಂದೆಯ ಫೋಟೊಗೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದ್ದಾರೆ. ಗದ್ದೆಯ ಬದಿಯಲ್ಲಿ ರಾಜ್ಕುಮಾರ್ ಅವರ ದೊಡ್ಡ ಭಾವಚಿತ್ರವಿಟ್ಟು ಪೂಜಿಸಿದ್ದಾರೆ. ಈ ಸಂದರ್ಭದಲ್ಲಿ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಮತ್ತು ಸ್ನೇಹಿತರು ಉಪಸ್ಥಿತಿ ಇದ್ದರು.
ಇನ್ನು, ರಾಘವೇಂದ್ರ ರಾಜ್ಕುಮಾರ್ ಕೂಡ ಬೆಳ್ಳಂಬೆಳಗ್ಗೆ ಕಂಠೀರವ ಸ್ಟುಡಿಯೋಗೆ ತೆರಳಿ ಸಮಾಧಿಗೆ ಪೂಜೆ ಅರ್ಪಿಸಿದ್ದಾರೆ. ಪುನೀತ್ ರಾಜ್ಕುಮಾರ್ ಹಾಡಿನ ಮೂಲಕ ತಮ್ಮ ಜೊತೆಗಿನ ಬಾಂಧವ್ಯವನ್ನ ಗುಣಗಾನ ಮಾಡಿದ್ದಾರೆ.