ಡಾ.ರಾಜ್ ಕುಟುಂಬದ ಅಪರೂಪದ ಮುತ್ತು, ಇಬ್ಬರು ಅಣ್ಣಂದಿರ ಸ್ವತ್ತು ಪುನೀತ್ ರಾಜ್ಕುಮಾರ್ ಕರ್ನಾಟಕದ ರತ್ನ.. ಅಭಿಮಾನಿಗಳ ಯುವರತ್ನ. ಅಪ್ಪನ ಹಾದಿಯಲ್ಲಿಯೇ ಸಾಗಿ ಕಷ್ಟದಲ್ಲಿದ್ದವರ ಕಣ್ಣೀರು ಒರೆಸಿದ ಅಮೂಲ್ಯ ರತ್ನ ಅಪ್ಪು ಅಂದ್ರೆ ಶಿವಣ್ಣನಿಗೆ ಅಚ್ಚು ಮೆಚ್ಚು.
ಸಹೋದರರಿಗಿಂತ ಹೆಚ್ಚಾಗಿ ಶಿವಣ್ಣ-ಅಪ್ಪು ಗೆಳೆಯರಂತಿದ್ದವರು. ರಾಮ-ಲಕ್ಷ್ಮಣರಂತೆ ಬಾಳಿ ಬದುಕುತ್ತಿದ್ದವರು. ಆದರೆ, ಅಪ್ಪು ಎಲ್ಲರನ್ನು ಅಗಲಿ ಬಾರದೂರಿಗೆ ಹೋಗಿದ್ದಾರೆ. ಹಾಗಂತಾ, ಅಪ್ಪು ನಮ್ಮೊಂದಿಗೆ ಇಲ್ಲ ಅಂತಲ್ಲ. ಅಭಿಮಾನಿಗಳ ಹೃದಯದಲ್ಲಿ ಸದಾ ಜೀವಂತ. ಕರುನಾಡಿನ ಮನೆ, ಮನದಲ್ಲಿ ಅಪ್ಪು ಎಂದೆಂದಿಗೂ ಅಮರ, ಅಜರಾಮರ..
ಪ್ರೀತಿಯ ಪುನೀತ್ನಿಗಾಗಿ ಅಣ್ಣ ಶಿವರಾಜ್ ಕುಮಾರ್ ತಮ್ಮ 'ಭಜರಂಗಿ 2' ಸಿನಿಮಾವನ್ನು ಅರ್ಪಿಸಿದ್ದಾರೆ. ಅಪ್ಪುಗೆ ತನ್ನ ತಮ್ಮ ಎಂಬ ಕಾರಣಕ್ಕಾಗಿ ಈ ಚಿತ್ರ ಅರ್ಪಿಸಿಲ್ಲ. ಅದರ ಹಿಂದೆ ಬಲವಾದ ಕಾರಣವೂ ಇದೆ ಅಂತಾರೆ ಶಿವರಾಜ್ ಕುಮಾರ್.
ಇದನ್ನೂ ಓದಿ: ಶಿವಣ್ಣ ಫ್ಯಾನ್ಸ್ಗೆ ಗುಡ್ ನ್ಯೂಸ್ : ಒಟಿಟಿಯಲ್ಲಿ ಭಜರಂಗಿ 2 ಸಿನಿಮಾ ವೀಕ್ಷಿಸಲು ಡೇಟ್ ಫಿಕ್ಸ್
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ನಿರ್ದೇಶಕ ಹರ್ಷ ಕಾಂಬಿನೇಷನ್ನಲ್ಲಿ ಮೂಡಿ ಬಂದ ಭಜರಂಗಿ 2 ಸಿನಿಮಾ ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ಸವಾಲುಗಳನ್ನು ಮೆಟ್ಟಿ ತಯಾರಾಗಿತ್ತು. ನಿರ್ಮಾಪಕರಾದ ಜಯಣ್ಣ ಮತ್ತು ಭೋಗಣ್ಣ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಿಸಿದ್ದರು.
ಆದರೆ, ಸಿನಿಮಾ ಬಿಡುಗಡೆಯಾದ ದಿನವೇ ಅಪ್ಪು ಇಹಲೋಕ ತ್ಯಜಿಸಿದ್ದರು. ಇದೀಗ ಭಜರಂಗಿ 2 ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗ್ತಿದೆ. ಇದೇ 23 ರಂದು 'ಜೀ 5' ಆ್ಯಪ್ನಲ್ಲಿ ಚಿತ್ರ ಅಬ್ಬರಿಸಲಿದೆ. ಒಟಿಟಿಯಲ್ಲಿ ಬಿಡುಗಡೆಯಾಗ್ತಿರುವ ಭಜರಂಗಿ 2 ಸಿನಿಮಾವನ್ನು ಶಿವಣ್ಣ ಅಪ್ಪುಗೆ ಅರ್ಪಿಸಿದ್ದಾರೆ.
ಇದನ್ನೂ ಓದಿ: ಭಜರಂಗಿ ಬೆನ್ನಹಿಂದೆ ನಿಂತು ಮರೆಯಾದ 'ಅಪ್ಪು': ಅಣ್ಣನ ಕೊನೆಯ ಕಾರ್ಯಕ್ರಮದಲ್ಲಿ 'ಯುವರತ್ನ'
"ಅಪ್ಪು ಈ ಸಿನಿಮಾವನ್ನು ಬಹಳ ಇಷ್ಟಪಟ್ಟಿದ್ದರು. ತಮ್ಮ ಸಿನಿಮಾವೆಂಬಂತೆ ಪ್ರೀತಿಸಿದ್ದರು. ಅಪ್ಪು ಎಡಿಟಿಂಗ್ ರೂಮ್ನಲ್ಲಿ ಈ ಚಿತ್ರ ಎಡಿಟ್ ಆಗಿತ್ತು. ಸಿನಿಮಾದ ಸಾಕಷ್ಟು ದೃಶ್ಯ ನೋಡಿ ಅಪ್ಪು ಮೆಚ್ಚಿದ್ದರು. ತುಂಬಾ ಚೆನ್ನಾಗಿ ಬಂದಿದೆ ಅಂತಾ ಹೊಗಳಿದ್ದರು. ಸಿನಿಮಾದ ಪ್ರಿ-ರಿಲೀಸ್ ಇವೆಂಟ್ನಲ್ಲಿ ಕೂಡ ಹೆಜ್ಜೆ ಹಾಕಿದ್ದರು.
ಅಷ್ಟೇ ಅಲ್ಲ, ರಿಲೀಸ್ ಆಗೋ ದಿನ ಬೆಳಗ್ಗೆ ವಿಷ್ ಮಾಡಿದ್ದರು. ಸಿನಿಮಾ ಡಿಸ್ಟ್ರಿಬ್ಯೂಟರ್ ಬಳಿ ಮಾಹಿತಿ ಪಡೆದಿದ್ದರು. ಇದರಲ್ಲೇ ಗೊತ್ತಾಗತ್ತೆ ಭಜರಂಗಿಗೆ ಎಷ್ಟು ಹತ್ರ ಅಪ್ಪು ಅಂತಾ.. ಈ ಸಿನಿಮಾದಲ್ಲಿ ಅಪ್ಪುಗೆ ರಿಲೇಟ್ ಆಗುವ ಸಾಕಷ್ಟು ಸನ್ನಿವೇಶಗಳು ಸಹ ಇವೆ" ಅಂತಾರೆ ಶಿವಣ್ಣ.
ಇದನ್ನೂ ಓದಿ: ಬೆಳಗ್ಗೆ 7.33ಕ್ಕೆ ಅಣ್ಣನ 'ಭಜರಂಗಿ-2' ಸಿನಿಮಾ ತಂಡಕ್ಕೆ ಶುಭ ಕೋರಿದ್ದರು ಅಪ್ಪು