ಅನೇಕ ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಶಿವಾಜಿ ಮೈಸೂರು ಇದೇ ಮೊದಲ ಬಾರಿಗೆ 'ಬೆಂಕಿಯ ಬಲೆ' ಎಂಬ ಚಿತ್ರವನ್ನು ನಿರ್ಮಿಸಿ ಜೊತೆಗೆ ನಾಯಕರಾಗಿ ಕೂಡಾ ನಟಿಸಿದ್ದಾರೆ. 1983 ರಲ್ಲಿ ಅನಂತ್ ನಾಗ್ ಹಾಗೂ ಲಕ್ಷ್ಮಿ ನಟಿಸಿದ್ದ 'ಬೆಂಕಿಯ ಬಲೆ' ಚಿತ್ರದ ಟೈಟಲನ್ನು ಈ ಚಿತ್ರಕ್ಕೆ ಬಳಸಿಕೊಳ್ಳಲಾಗಿದೆ.

ಇನ್ನು 80 ಲಕ್ಷ ರೂಪಾಯಿ ಬಜೆಟ್ನ 'ಬೆಂಕಿಯ ಬಲೆ' ಚಿತ್ರದಿಂದ ಬಂದ ಸಂಪೂರ್ಣ ಲಾಭವನ್ನು ಕ್ಯಾನ್ಸರ್ ಆಸ್ಪತ್ರೆಗೆ ದಾನ ಮಾಡುವುದಾಗಿ ಶಿವಾಜಿ ಮೈಸೂರು ಹೇಳಿಕೊಂಡಿದ್ದಾರೆ. ಶಿವಾಜಿ ಮೈಸೂರು, ಹೆಸರೇ ಸೂಚಿಸುವಂತೆ ಸಾಂಸ್ಕೃತಿಕ ನಗರಿ ಮೈಸೂರಿನ ಮಂಡಿ ಮೊಹಲ್ಲಾ ನಿವಾಸಿ. ಇವರು ವೃತ್ತಿಯಲ್ಲಿ ಸಿವಿಲ್ ಕಾಂಟ್ರ್ಯಾಕ್ಟರ್. "2005 ರಲ್ಲಿ ಕ್ಯಾನ್ಸರ್ನಿಂದ ನನ್ನ ತಾಯಿ ಲೀಲಾವತಿಯನ್ನು ಕಳೆದುಕೊಂಡೆ. ಅದಾದ ಕೆಲವು ವರ್ಷಗಳಲ್ಲಿ ತಂದೆ ನಾಗರಾಜ್ ಅವರನ್ನೂ ಕಳೆದುಕೊಂಡೆ. ಕ್ಯಾನ್ಸರ್ ರೋಗಿಗಳ ಕಷ್ಟ ಏನೆಂದು ನನಗೆ ಗೊತ್ತು. ಆದ್ದರಿಂದ ಚಿತ್ರದಿಂದ ಬಂದ ಹಣವನ್ನು ಕ್ಯಾನ್ಸರ್ ಆಸ್ಪತ್ರೆಗೆ ನೀಡಲಿದ್ದೇನೆ" ಎಂದು ಶಿವಾಜಿ ಮೈಸೂರು ಹೇಳಿದ್ದಾರೆ.

ರಾಜ್ಯದ ಸುಮಾರು 50 ಥಿಯೇಟರ್ಗಳಲ್ಲಿ ತಮ್ಮ ಸಿನಿಮಾವನ್ನು ಬಿಡುಗಡೆ ಮಾಡುತ್ತಿದ್ದಾರೆ. ತಮ್ಮ ಮನಸ್ಸಿನಲ್ಲಿ ಇದ್ದ ವಿಚಾರವನ್ನೇ ಚಿತ್ರದಲ್ಲಿ ತೋರಿಸಿದ್ದಾರೆ. ತಂದೆ-ತಾಯಿ ಸೆಂಟಿಮೆಂಟ್, ಪ್ರೀತಿ, ಹೆಣ್ಣು ಮಕ್ಕಳ ಗೌರವ, ರಕ್ಷಣೆ, ಆ್ಯಕ್ಷನ್ ಎಲ್ಲಾ ಈ ಚಿತ್ರದಲ್ಲಿದೆ. ಚಿತ್ರದಲ್ಲಿ 5 ಹಾಡುಗಳಿವೆ. ಚಿತ್ರ ನಿರ್ಮಾಣಕ್ಕೆ ಮುಂದಾದಾಗ ನಟಿಸಲು ಹಲವಾರು ದೊಡ್ಡ ನಟರನ್ನು ಕೇಳಿದ್ದರಂತೆ. ಆದರೆ ಯಾರೂ ಮುಂದೆ ಬರದಿದ್ದಾಗ ತಾವೇ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ.

ಇಂದು ಬೆಂಗಳೂರಿನ ಕಲಾವಿದರ ಭವನದಲ್ಲಿ ಚಿತ್ರ ಪ್ರದರ್ಶನ, ಚಿತ್ರದ ಆಡಿಯೋ ಹಾಗೂ ಟ್ರೇಲರ್ ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ಹಿಂದಿ ಹಾಗೂ ತಮಿಳಿನಿಂದ ರೈಟ್ಸ್ಗೆ ಬೇಡಿಕೆ ಬಂದಿದ್ದು ಬಾಲು ಎಂಬುವವರು 'ನೇರ್ಪು ಓರು ಕಾದಲ್ ಕೊಲೈ' ಎಂಬ ಹೆಸರಿನಲ್ಲಿ ಬೆಂಕಿಯ ಬಲೆ ರೀಮೇಕ್ ಮಾಡುತ್ತಿದ್ದಾರೆ ಎನ್ನಲಾಗಿದೆ.