ಸ್ಯಾಂಡಲ್ವುಡ್ ಕಿಂಗ್, ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಹೀಗೆ ಹಲವಾರು ಬಿರುದುಗಳಿಂದ ಕರೆಸಿಕೊಳ್ಳುವ ಏಕೈಕ ನಟ ಶಿವರಾಜ್ ಕುಮಾರ್. ಈ ಕರುನಾಡ ಚಕ್ರವರ್ತಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಬರೋಬ್ಬರಿ 35 ವರ್ಷಗಳನ್ನ ಪೂರೈಸಿದ್ದಾರೆ.
ಚಿತ್ರರಂಗದಲ್ಲಿ ಶಿವಣ್ಣ ಮೂರೂವರೆ ದಶಕ ಪೂರೈಸಿದ ಹಿನ್ನೆಲೆಯಲ್ಲಿ, ಶಿವರಾಜ್ ಕುಮಾರ್ ಅಭಿಮಾನಿಗಳ ಸೇನಾ ಸಮಿತಿ, ನಾಗವಾರದ ಶಿವರಾಜ್ ಕುಮಾರ್ ನಿವಾಸದಲ್ಲಿ ಕೇಕ್ ಕಟ್ ಮಾಡುವ ಮೂಲಕ ಅಭಿಮಾನಿಗಳ ಜೊತೆ, 35ನೇ ವರ್ಷದ ಸಿನಿಮಾ ಸಂಭ್ರಮವನ್ನ ಆಚರಿಸಿದ್ದಾರೆ.
ಇದರ ಜೊತೆಗೆ ಶಿವರಾಜ್ ಕುಮಾರ್ 35ನೇ ವರ್ಷದ ಕಾಮನ್ ಡಿಪಿಯನ್ನ ಚಿತ್ರರಂಗದ ಸ್ನೇಹಿತರು ಹಾಗೂ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಶುಭಾಶಯ ಹೇಳಿದ್ದಾರೆ. ಅಂದ್ಹಾಗೆ, ಶಿವರಾಜ್ ಕುಮಾರ್ ಆನಂದ್ ಸಿನಿಮಾದ ಮೂಲಕ ನಾಯಕನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು.
1986ರಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಸಿಂಗೀತಂ ಶ್ರೀನಿವಾಸ್ ರಾವ್ ಈ ಚಿತ್ರ ನಿರ್ದೇಶಿಸಿದ್ದರು. ಅಲ್ಲಿಂದ ಇಲ್ಲಿಯವರೆಗೂ ಸುಮಾರು 125ಕ್ಕೂ ಅಧಿಕ ಸಿನಿಮಾಗಳಲ್ಲಿ ಸೆಂಚುರಿ ಸ್ಟಾರ್ ನಟಿಸಿದ್ದಾರೆ. ಸೋಲು, ಗೆಲುವು, ಬಾಕ್ಸ್ ಆಫೀಸ್ ಎಲ್ಲವೂ ಕಂಡಿದ್ದಾರೆ.
ಹಾಗಾಗಿ, ಶಿವಣ್ಣ ಅವರನ್ನು ಬಾಕ್ಸ್ ಆಫೀಸ್ ಬ್ರಹ್ಮ ಅಂತಾರೆ. ಸದ್ಯ 58ರ ವಯಸ್ಸಿನಲ್ಲೂ ಶಿವರಾಜ್ ಕುಮಾರ್ ಬಹಳ ಬ್ಯುಸಿ ಇದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಲೇ ಇದ್ದಾರೆ. ಭಜರಂಗಿ-2 ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಶಿವಪ್ಪ ಸಿನಿಮಾನೂ ರಿಲೀಸ್‌ಗೆ ಸಿದ್ದವಾಗಿದೆ.