ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸೇವಂತಿ' ಧಾರಾವಾಹಿಯಲ್ಲಿ ನಾಯಕ ಅರ್ಜುನ್ ಆಗಿ ಮನೆ ಮಾತಾಗಿದ್ದ ಶಿಶಿರ್ ಶಾಸ್ತ್ರಿ ಈಗ ಬಿಲ್ಗೇಟ್ಸ್ ಆಗಿ ಬದಲಾಗಿದ್ದಾರೆ. ಇಂದು ಬಿಡುಗಡೆಯಾಗಿರುವ 'ಬಿಲ್ಗೇಟ್ಸ್' ಚಿತ್ರದಲ್ಲಿ ಶಿಶಿರ್ ಶಾಸ್ತ್ರಿ ಚಿಕ್ಕಣ್ಣ ಜೊತೆ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಈಗಾಗಲೇ ಕಿರುತೆರೆಯಲ್ಲಿ ಅಭಿನಯಿಸಿ ಮನೆ ಮಾತಾಗಿರುವ ಶಿಶಿರ್, ಇದೀಗ ಬೆಳ್ಳಿತೆರೆಯಲ್ಲಿ ಕೂಡಾ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. 'ಸೊಸೆ ತಂದ ಸೌಭಾಗ್ಯ' ಧಾರಾವಾಹಿ ಮೂಲಕ ಕಿರುತೆರೆ ಪಯಣ ಆರಂಭಿಸಿದ ಶಿಶಿರ್ ಶಾಸ್ತ್ರಿ, ನಂತರ 'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ಶ್ಯಾಮ್ ಆಗಿ ಮಿಂಚಿದರು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಭಾರತಿ' ಧಾರಾವಾಹಿಯಲ್ಲಿ ನಾಯಕ ಮನೋಜ್ ಆಗಿ ಅಭಿನಯಿಸಿ ಮನೆ ಮಾತಾಗಿದ್ದ ಶಿಶಿರ್ ಅವರಿಗೆ ಹೆಸರು ತಂದು ಕೊಟ್ಟಿದ್ದು 'ಕುಲವಧು' ಧಾರಾವಾಹಿಯ ವೇದ್ ಪಾತ್ರ.
ತಮ್ಮದೇ ಆದ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯನ್ನು ಹೊಂದಿದ್ದ ಶಿಶಿರ್ ಶಾಸ್ತ್ರಿ ಆಕಸ್ಮಿಕವಾಗಿ ನಟನಾ ಲೋಕಕ್ಕೆ ಕಾಲಿರಿಸಿದರು. ಶಿಶಿರ್ ಅವರನ್ನು ನೋಡಿದ ಒಬ್ಬರು ಧಾರಾವಾಹಿಗೆ ಆಡಿಷನ್ ನಡೆಯುತ್ತಿದೆ. ನೀವ್ಯಾಕೆ ಒಮ್ಮೆ ಟ್ರೈ ಮಾಡಬಾರದು ಎಂದು ಕೇಳಿದ್ದಾರೆ. ಒಮ್ಮೆ ಏಕೆ ಪ್ರಯತ್ನಿಸಬಾರದು ಎಂದುಕೊಂಡ ಶಿಶಿರ್ ಆಡಿಷನ್ಗೆ ಹೋಗಿದ್ದಾರೆ. ಅದೃಷ್ಟ ಎಂಬಂತೆ ಧಾರಾವಾಹಿಯಲ್ಲಿ ನಟಿಸಲು ಸೆಲೆಕ್ಟ್ ಆಗಿದ್ದಾರೆ. ಕಿರುತೆರೆ ಪ್ರಯಾಣ ಆರಂಭವಾದ ಮೇಲೆ ಶಿಶಿರ್ ಇಲ್ಲಿವರೆಗೂ ಬಂದು ನಿಂತಿದ್ದಾರೆ. ಶಿಶಿರ್ ನಟ ಮಾತ್ರವಲ್ಲ, ಉತ್ತಮ ನೃತ್ಯಗಾರ ಕೂಡಾ. 9 ನೇ ವಯಸ್ಸಿನಲ್ಲಿ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದ ಶಿಶಿರ್ ಈಗಾಗಲೇ ಸುಮಾರು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ಮಾಡಿದ್ದಾರೆ. ನಟನೆಗೆ ಕಾಲಿಟ್ಟ ಮೇಲೆ ನೃತ್ಯಾಭ್ಯಾಸ ಮಾಡಲಾಗದಿದ್ದರೂ ಬಿಡುವಿನ ವೇಳೆ ನೃತ್ಯಾಭ್ಯಾಸ ಮಾಡುತ್ತಾರೆ.
ನಟನಾ ಕ್ಷೇತ್ರದಲ್ಲಿ ಮಿಂಚಬೇಕೆಂದರೆ ಶ್ರದ್ಧೆ ಮತ್ತು ಪರಿಶ್ರಮ ತುಂಬಾ ಮುಖ್ಯ. ಬಣ್ಣದ ಬದುಕಿನಿಂದ ನಾನು ಸಾಕಷ್ಟು ವಿಚಾರಗಳನ್ನು ಕಲಿತೆ. ರಾಮ್ ಜಿ ಅವರು ನನ್ನ ವೃತ್ತಿ ಜೀವನದ ಗುರುಗಳು ಎನ್ನುವ ಶಿಶಿರ್ ನಟನಾ ಲೋಕದಲ್ಲಿ ಒಂದೊಂದು ಹೆಜ್ಜೆ ಇಡುವಾಗಲೂ ರಾಮ್ ಜಿ ಅವರನ್ನು ನೆನೆಯುತ್ತಾರೆ. ಮಿ. ಎಲ್ಎಲ್ಬಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿರುವ ಶಿಶಿರ್ ಶಾಸ್ತ್ರಿ, ಬಿಲ್ಗೇಟ್ಸ್ ಮೂಲಕ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. 'ಕುಲವಧು'ವಿನ ವೇದ್ ಮತ್ತು 'ಸೊಸೆ ತಂದ ಸೌಭಾಗ್ಯ'ದ ರಾಘವ್ ಪಾತ್ರ ನನಗೆ ಸಾಕಷ್ಟು ಹೆಸರು ತಂದುಕೊಟ್ಟಿದೆ ಎನ್ನುವ ಶಿಶಿರ್, ಹಿರಿತೆರೆಯಲ್ಲಿ ಯಶಸ್ಸು ಸಾಧಿಸಲಿದ್ದಾರಾ ಎಂಬುದನ್ನು ಕಾದುನೋಡಬೇಕಿದೆ.