ಕೊರೊನಾ ಎರಡನೇ ಅಲೆ ವೇಗವಾಗಿ ಹರಡುತ್ತಿದ್ದು, ಮನುಕುಲಕ್ಕೆ ಸಂಕಷ್ಟ ತಂದೊಡ್ಡಿದೆ. ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿರುವ ಮಹಾಮಾರಿಯಿಂದ ಪಾರಾಗಲು ಕರ್ನಾಟಕ ಸರ್ಕಾರ ಈಗಾಗಲೇ ಹದಿನಾಲ್ಕು ದಿನಗಳ ಲಾಕ್ಡೌನ್ ಘೋಷಿಸಿದೆ. ಇದರ ನಡುವೆ ಜನರ ಜೀವನ ಬದಲಾಗಿ ಹೋಗಿದೆ. ಎಲ್ಲರೂ ತೊಂದರೆ ಅನುಭವಿಸುತ್ತಿದ್ದಾರೆ. ಕಿರುತೆರೆ ಕಲಾವಿದರುಗಳು ಕೂಡಾ ಇದಕ್ಕೆ ಹೊರತಾಗಿಲ್ಲ. ಕೊರೊನಾದಿಂದಾಗಿ ತಮ್ಮ ಬದುಕಿಗೆ ಆಗಿರುವ ಅಭದ್ರತೆ ಏನು, ಏನೆಲ್ಲಾ ಸವಾಲುಗಳು ಈ ಸಂಕಷ್ಟದ ಸಮಯದಲ್ಲಿ ಎದುರಾಗುತ್ತದೆ ಎಂಬುದನ್ನು ಹೇಳಿಕೊಂಡಿದ್ದಾರೆ.
ಅನಿಕಾ ಸಿಂಧ್ಯಾ
ಮೊದಲನೆಯದಾಗಿ ಇದೀಗ ಕಿರುತೆರೆ ಕಲಾವಿದರುಗಳಿಗೆ ಕೆಲಸದ ಬಗ್ಗೆ ಯಾವುದೇ ಭದ್ರತೆ ಇಲ್ಲದಂತಾಗಿದೆ. ಬೇರೆಯ ವೃತ್ತಿಯಲ್ಲಿದ್ದು, ನಟನೆಯನ್ನು ಪ್ರವೃತ್ತಿಯಾಗಿ ತೆಗೆದುಕೊಂಡರೆ ಮಾತ್ರವಷ್ಟೇ ಇಲ್ಲಿ ಆರಾಮವಾಗಿ ಜೀವನವನ್ನು ಸಾಗಿಸಬಹುದು. ಇದರ ಹೊರತಾಗಿ ನಟನೆಯೇ ನಿಮ್ಮ ಜೀವನಕ್ಕೆ ಆಧಾರ ಎಂದಾದರೆ ನಟನೆಯನ್ನು ನಿಮ್ಮ ಪ್ಯಾಶನ್ ಆಗಿದ್ದರೆ ಇಲ್ಲಿ ಜೀವನ ನಡೆಸುವುದು ಸುಲಭ. ಆದರೆ ನಟನೆ ಒಂದೇ ನಿಮ್ಮ ಜೀವನಕ್ಕೆ ಆಧಾರವಾಗಿದ್ದರೆ ಜೀವನ ನಡೆಸುವುದು ಸವಾಲೇ ಸರಿ. ಯಾಕೆಂದರೆ ಇಲ್ಲಿ ಶೂಟಿಂಗ್ ಇದ್ದರೆ ಮಾತ್ರವೇ ಸಂಭಾವನೆ ಬರುತ್ತದೆ. ಶೂಟಿಂಗ್ ಇಲ್ಲವಾದರೆ ಏನು ಇಲ್ಲ. ಇದರಿಂದ ಕಲಾವಿದರು ಖಿನ್ನತೆಗೆ ಒಳಗಾಗುವಂತಾಗುತ್ತದೆ.
ಗೀತಾ ಭಾರತಿ ಭಟ್
ಹಿಂದಿನ ಲಾಕ್ಡೌನ್ ನಿಂದಾಗಿರುವ ಪರಿಣಾಮಗಳನ್ನು ನಾವು ಇದೀಗ ಸರಿಪಡಿಸಿಕೊಳ್ಳುತ್ತಿದ್ದೇವೆ. ಕಳೆದ ವರ್ಷವೇ ಇಂಡಸ್ಟ್ರಿಯ ಸಿಬ್ಬಂದಿ ವರ್ಗದವರಿಂದ ಹಿಡಿದು ಕಲಾವಿದರವರೆಗೆ ತುಂಬಾ ಜನರಿಗೆ ಆಗಿರುವಂತಹ ನಷ್ಟ ಅಷ್ಟಿಷ್ಟಲ್ಲ. ಶೂಟಿಂಗ್ ನಿಂದ ಸಿಗುವ ದಿನಗೂಲಿಯಿಂದ ಬದುಕು ಸಾಗಿಸುವವರಿದ್ದಾರೆ. ಇನ್ನು ಕಳೆದ ವರ್ಷ ಹಲವು ಮಂದಿ ಸಹಾಯ ಹಸ್ತ ಮಾಡಿದ್ದಾರೆ. ಆದರೆ, ಈಗ ಸ್ಥಿತಿ ಬದಲಾಗಿದೆ. ಮತ್ತೊಬ್ಬರಿಗೆ ಸಹಾಯ ಮಾಡಬೇಕೆಂದು ನೀವು ಅಂದುಕೊಂಡಿದ್ದರೆ ಮೊದಲು ನೀವು ಭದ್ರವಾಗಿರಬೇಕಾದುದು ಮುಖ್ಯ.
ಅನು ಜನಾರ್ಧನ್
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾದಿಂದಾಗಿ ಎಲ್ಲರಲ್ಲೂ ಭಯ ತುಂಬಿಹೋಗಿದೆ. ಹಾಗೇ ನೋಡಿದರೆ ಕಲಾವಿದರಿಗೆ ಕೊಂಚ ಜಾಸ್ತಿಯೇ ಭಯವಿದೆ. ಯಾಕೆಂದರೆ ಕೊರೊನಾದ ಹಾವಳಿಯಿಂದಾಗಿ ಒಂದೋ ಇದಕ್ಕಿದ್ದಂತೆ ಪಾತ್ರದಲ್ಲಿ ಬದಲಾವಣೆಯಾಗುತ್ತದೆ, ಇಲ್ಲವೋ ಪ್ರಸ್ತುತ ಶೋ ಮುಕ್ತಾಯಗೊಳ್ಳುತ್ತದೆ. ಇದು ಈಗಿನ ಸನ್ನಿವೇಶದಲ್ಲಿ ಕಲಾವಿದರು ಎದುರಿಸಬಹುದಾದ ಭಯದ ವಿಷಯ. ಕಳೆದ ವರ್ಷ ಅಮ್ನೋರು ಧಾರಾವಾಹಿಯಲ್ಲಿ ನಾನು ಅಭಿನಯಿಸುತ್ತಿದ್ದೆ. ನನ್ನ ಪಾತ್ರ ಇನ್ನೇನೂ ತಿರುವು ಪಡೆದುಕೊಳ್ಳುತ್ತದೆ ಎಂದಾದಾಗ ಲಾಕ್ಡೌನ್ ಹೇರಲಾಯಿತು. ಮಾತ್ರವಲ್ಲ ಶೋ ಕೂಡಾ ನಿಂತುಹೋಯಿತು. ಆದರೆ ಈ ಬಾರಿ ಹಾಗಿಲ್ಲ.ಇದೀಗ ನಾನು ಸತ್ಯ ಧಾರಾವಾಹಿಯಲ್ಲಿ ನಟಿಸುತ್ತಿದ್ದೇನೆ. ಧಾರಾವಾಹಿಯು ಕೂಡಾ ಚೆನ್ನಾಗಿ ಬರುತ್ತಿದೆ.