ಬೆಂಗಳೂರು: ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕನ್ನಡದ ಹಿರಿಯ ನಟ ಸತ್ಯಜಿತ್ (72) ಅವರು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕಳೆದ ರಾತ್ರಿ ನಿಧನರಾದರು.
ಹಾರ್ಟ್ ಸ್ಟ್ರೋಕ್ ಹಾಗೂ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಸತ್ಯಜಿತ್ ತಡರಾತ್ರಿ 2 ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ. ಇವರು ನಾಲ್ಕು ವರ್ಷಗಳ ಹಿಂದೆ ಗ್ಯಾಂಗ್ರಿನ್ ಸಮಸ್ಯೆಯಿಂದ ಎಡ ಕಾಲನ್ನು ಕಳೆದುಕೊಂಡಿದ್ದರು.
ಹೆಗಡೆನಗರದ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ
ಬೆಂಗಳೂರಿನ ಹೆಗಡೆ ನಗರದಲ್ಲಿರೋ ನಿವಾಸಕ್ಕೆ ಪಾರ್ಥಿವ ಶರೀರ ತರಲಾಗಿದೆ. ಸತ್ಯಜಿತ್ ಅವರು ಮೂವರು ಮಕ್ಕಳು ಹಾಗು ಪತ್ನಿಯನ್ನು ಅಗಲಿದ್ದಾರೆ. ಹೆಗಡೆನಗರದ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ಮಾಡಲು ಕುಟುಂಬ ವರ್ಗ ತೀರ್ಮಾನ ಮಾಡಿಕೊಂಡಿದೆ ಎಂದು ಪುತ್ರ ಆಕಾಶ್ ತಿಳಿಸಿದರು.
ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಿವರಾಜ್ ಕುಮಾರ್, ಪುನೀತ್ ರಾಜ್‍ಕುಮಾರ್, ಸುದೀಪ್, ದರ್ಶನ್ ಸೇರಿದಂತೆ ಸಾಕಷ್ಟು ಕಲಾವಿದರ ಸುಮಾರು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸತ್ಯಜಿತ್ ಖಳನಟ ಹಾಗೂ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದರು.
1986ರಿಂದಲೂ ಸಿನಿಮಾ ರಂಗದಲ್ಲಿರುವ ಅವರು ಕನ್ನಡ ಮಾತ್ರವಲ್ಲದೇ, ತೆಲುಗು ಹಾಗೂ ಹಿಂದಿ ಭಾಷೆಯ ಚಿತ್ರಗಳಲ್ಲೂ ನಟಿಸಿದ್ದರು. 2018ರಲ್ಲಿ ತೆರೆಕಂಡ ಪ್ರಿಯಾಂಕಾ ಉಪೇಂದ್ರ ಅಭಿನಯದ ಸೆಕೆಂಡ್ ಹಾಫ್ ಚಿತ್ರದ ನಂತರ ಸತ್ಯಜಿತ್ ಯಾವುದೇ ಸಿನಿಮಾಗಳಲ್ಲಿಯೂ ನಟಿಸಿರಲಿಲ್ಲ.
ಇದನ್ನೂ ಓದಿ: ಕೊರೊನಾದಿಂದ ಮೃತ ವ್ಯಕ್ತಿಯ ಕುಟುಂಬಸ್ಥರಿಗೆ ಸರ್ಕಾರದಿಂದ ಪರಿಹಾರ: ಹೀಗೆ ಅರ್ಜಿ ಸಲ್ಲಿಸಿ