ಹಿರಿಯ ಕನ್ನಡ ನಟಿ ಎಂ.ಎನ್.ಲಕ್ಷ್ಮೀದೇವಿ ಮೊಮ್ಮಗಳೊಂದಿಗೆ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಂಡರು. ಕಿರುತೆರೆ ನಟಿ ದೀಪಿಕಾ ಶರಣ್ ತಮ್ಮ ಅಜ್ಜಿಯ ಹುಟ್ಟುಹಬ್ಬ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಡೀ ಕುಟುಂಬ ಸದಸ್ಯರು ಹಾಗೂ ಕಿರುತೆರೆಯ ಹಲವು ನಟಿಯರು ಒಟ್ಟಿಗೆ ಸೇರಿ ಕೇಕ್ ಕಟ್ ಮಾಡುವ ಮೂಲಕ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದಾರೆ.
ಲಕ್ಷ್ಮೀ ದೇವಿ ಅಜ್ಜಿಯ ಮೊಮ್ಮಗಳಾಗಿರುವುದು ಅದೃಷ್ಟ ಹಾಗೂ ಹೆಮ್ಮೆ ಆಗಿದೆ. ನನ್ನ ಜೀವನದಲ್ಲಿ ನಟನಾ ಕ್ಷೇತ್ರಕ್ಕೆ ಬಂದ ನಂತರ ಅಜ್ಜಿಯ ಮಾರ್ಗದರ್ಶನ ಹಾಗೂ ಬೆಂಬಲವೇ ನನಗೆ ಸ್ಫೂರ್ತಿ ಎನ್ನುತ್ತಾರೆ ದೀಪಿಕಾ ಶರಣ್. ಸುಮಾರು ಆರು ದಶಕಗಳ ಕಾಲ 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಲಕ್ಷ್ಮಿದೇವಿ ಅವರು ಇತ್ತೀಚೆಗೆ ಕಿರುತೆರೆಯಲ್ಲೂ ಗಮನ ಸೆಳೆದಿದ್ದರು. ಪದ್ಮಾವತಿ ಧಾರಾವಾಹಿಯಲ್ಲಿ ಪಾತ್ರ ನಿರ್ವಹಿಸಿದ್ದರು. ಅಲ್ಲದೇ, ಇತ್ತೀಚೆಗೆ ಮೇರಿ ಎಂಬ ಸಿನಿಮಾದಲ್ಲಿ ಮೇರು ಪಾತ್ರ ಮಾಡುತ್ತಿದ್ದಾರೆ.
ಓದಿ : ಬರ್ತ್ಡೇ ಮುಗಿಸಿ ಶೂಟಿಂಗ್ನತ್ತ ಚಿತ್ತ ಹರಿಸಿದ ರಜಿನಿಕಾಂತ್
ಮಂಡ್ಯ ಮೂಲದವರಾದ ಲಕ್ಷ್ಮೀದೇವಿ ಗಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಂತರ ನೃತ್ಯ ಕಲಿತು ಹಲವು ಸಿನಿಮಾಗಳಲ್ಲಿ ರಾಧೆಯಾಗಿ ಗಮನಸೆಳೆದಿದ್ದಾರೆ. ಗುಬ್ಬಿ ಕಂಪನಿ ಸೇರಿ ನಾಟಕಗಳಲ್ಲಿ ಚಿಕ್ಕಪುಟ್ಟ ಪಾತ್ರಗಳನ್ನು ನಿರ್ವಹಿಸಿದ್ದಾರೆ. 1962 ರಲ್ಲಿ ತೆರೆಕಂಡ `ರತ್ನಮಂಜರಿ' ಚಿತ್ರದ `ಯಾರು ಯಾರು ನೀ ಯಾರು' ಗೀತೆ, ಹುಣಸೂರು ಕೃಷ್ಣಮುರ್ತಿಯವರ ಎಲ್ಲಾ ಚಿತ್ರಗಳಲ್ಲಿಯೂ ಇವರಿಗೆ ಒಂದು ಪಾತ್ರ ಇರುತ್ತಿತ್ತು. ನಂತರ ಮದ್ರಾಸಿನ `ಮಾಡರ್ನ್ ಥಿಯೇಟರ್ಸ್'ನ ಚಿತ್ರಗಳಲ್ಲಿ ನಟಿಸತೊಡಗಿದರು. ಬಾಲಕೃಷ್ಣ, ನರಸಿಂಹರಾಜು, ಡಾ.ರಾಜಕುಮಾರ್, ಪಂಡರಿ ಬಾಯಿ ಮುಂತಾದ ಕಲಾವಿದರ ಜೊತೆ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.