ಆ ಕಾಲದಲ್ಲಿ ಏನು ಇಲ್ಲದೆ ಇದ್ದಾಗ ಸಿನಿಮಾಗಳು ಗೆದ್ದಿವೆ. 100 ದಿವಸ, ಸಿಲ್ವರ್ ಜುಬಿಲಿ ಆಚರಿಸಿವೆ. ಈಗ ಎಲ್ಲಾ ಇದ್ದರೂ ಸಿನಿಮಾಗಳು ಸೋಲು ಅನುಭವಿಸುತ್ತಿವೆ ಎಂದು ಹಿರಿಯ ನಟ ಶ್ರೀಧರ್ ಬೇಸರ ವ್ಯಕ್ತಪಡಿಸಿದ್ದಾರೆ.
ಕೆ.ಎಸ್ ಶ್ರೀಧರ್ ನೂರಾರು ಸಿನಿಮಾಗಳು, ಧಾರಾವಾಹಿಗಳು, ರಂಗಂಭೂಮಿಯಲ್ಲಿ ಪಳಗಿದವರು. ಇವರು ಕನ್ನಡ ಸಿನಿಮಾಗಳನ್ನು ಹೆಚ್ಚಾಗಿ ಜನ ಯಾಕ ನೋಡ್ತಾ ಇಲ್ಲ ಎಂಬುದರ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
1980ರ ಕಾಲವನ್ನು ನೆನಪಿಸಿಕೊಂಡಿ ನಟ ಶ್ರೀಧರ್, ಅಂದಿನ ದಿವಸಗಳಲ್ಲಿ ಪುಟ್ಟಣ್ಣ ಚಿತ್ರ ತಯಾರಿಕೆ ಮಾಡುವ ಮುಂಚೆ ಒಂದು ಚರ್ಚೆಯನ್ನು ಏರ್ಪಾಡು ಮಾಡುತ್ತಿದ್ದರು. ಆ ಚರ್ಚೆಗೆ ಎಲ್ಲರೂ ಕಾದಂಬರಿ ಓದಿಕೊಂಡು ಬರಬೇಕಿತ್ತು. ಎಲ್ಲ ರೀತಿಯಲ್ಲೂ ಚರ್ಚೆ ಮಾಡ್ತಾ ಇದ್ದರು. ಅದರಲ್ಲಿ ಕೆಲವು ಪತ್ರಕರ್ತರು ಸಹ ಭಾಗವಹಿಸುತ್ತಿದ್ರು. ಈ ಬೆಳವಣಿಗೆ ಚಿತ್ರ ತಯಾರಿಕೆಗೆ ಬಹಳ ಪ್ರಯೋಜನವಾಗ್ತಿತ್ತು. ಇನ್ನೂ ಪ್ರಚಾರಕ್ಕೆ ಬಂದರೆ ಆಗ ಕೇವಲ ಮುದ್ರಣ ಮಾಧ್ಯಮ. ಆದ್ರೂ ಅನೇಕ ಸಿನಿಮಗಳು ಚೆನ್ನಾಗಿಯೇ ಪ್ರದರ್ಶನ ಆಗಿದ್ದವು.
ಈಗ ಒಂದು ಚಿತ್ರ ಮಾಡುವುದಕ್ಕೆ ಮುಂಚೆ ಯಾವ ಚರ್ಚೆಯೂ ಆಗುವುದಿಲ್ಲ. ಕೆಲವು ನಟರಿಗೆ ನಿಮ್ಮ ವಿಭಾಗವನ್ನು ನೀವೇ ಬರೆದುಕೊಂಡು ಬಂದು ಬಿಡಿ ಸಾರ್ ಎನ್ನುತ್ತಾರೆ. ಆದರೆ ಅದೃಷ್ಟ ಅಂದರೆ ಈಗ ಮಾಧ್ಯಮಗಳು ಹೇರಳವಾಗಿವೆ. ಹಲವು ದೃಶ್ಯ ಮಾಧ್ಯಮಗಳು, ಪತ್ರಿಕೆಗಳು, ವಾರ ಪತ್ರಿಕೆಗಳು, ವೆಬ್ ಸೈಟ್, ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಂ ಹೀಗೆ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ಬಗ್ಗೆ ವಿಚಾರ ಹಬ್ಬಿದರು ಸಿನಿಮಾ ಮಂದಿರಕ್ಕೆ ಪ್ರೇಕ್ಷಕರು ಯಾಕೆ ಬರುತ್ತಿಲ್ಲ ಎಂಬುದು ಗಮನಿಸಬೇಕಾದ ವಿಚಾರ ಎಂದರು.
ನಟ ಶ್ರೀಧರ್ ‘ಅಂದವಾದ’ ಸಿನಿಮಾ ಸುದ್ದಿ ಗೋಷ್ಠಿಗೆ ಬಂದಾಗ ಈ ವಿಚಾರಗಳನ್ನು ಹೇಳಿಕೊಂಡರು.