ಬಾಲಿವುಡ್ನಲ್ಲಿ ಸಲ್ಮಾನ್ ಖಾನ್ ಜೊತೆ 'ಮೈನೆ ಪ್ಯಾರ್ ಕಿಯಾ' ಚಿತ್ರದಲ್ಲಿ ನಟಿಸಿ ಜನಪ್ರಿಯತೆ ಪಡೆದ ನಟಿ ಭಾಗ್ಯಶ್ರೀ, ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಜೊತೆ ಕನ್ನಡದಲ್ಲಿ 'ಅಮ್ಮಾವ್ರ ಗಂಡ' ಚಿತ್ರದಲ್ಲಿ ಕೂಡಾ ನಟಿಸಿ ಕನ್ನಡಿಗರಿಗೆ ಪರಿಚಯ ಆದರು.
2006 ರಲ್ಲಿ ಮತ್ತೆ ಶಿವಣ್ಣ ಅಭಿನಯದ 'ಗಂಡುಗಲಿ ಕುಮಾರರಾಮ' ಚಿತ್ರದಲ್ಲಿ ನಟಿಸಿದ ನಂತರ ಮತ್ತೆ 12 ವರ್ಷಗಳ ನಂತರ ನಿಖಿಲ್ ತಾಯಿ ಆಗಿ 'ಸೀತಾರಾಮ ಕಲ್ಯಾಣ' ಚಿತ್ರದಲ್ಲಿ ಕಾಣಿಸಿಕೊಂಡರು. ಈಗ ಭಾಗ್ಯಶ್ರೀ ಕಂಗನಾ ರಣಾವತ್ ತಾಯಿ ಆಗಿ ತಮಿಳುನಾಡು ಮಾಜಿ ಸಿಎಂ, ದಿವಂಗತ ಜಯಲಲಿತಾ ಅವರ ಬಯೋಪಿಕ್ 'ತಲೈವಿ' ಚಿತ್ರದಲ್ಲಿ ಕೂಡಾ ನಟಿಸಿದ್ದಾರೆ. ಈ ಚಿತ್ರದಲ್ಲಿ ಭಾಗ್ಯಶ್ರೀ ಜಯಲಲಿತಾ ತಾಯಿ ಸಂಧ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಕನ್ನಡದಲ್ಲಿ ರವಿಚಂದ್ರನ್ ಜೊತೆ 'ಅಣ್ಣಯ್ಯ' ಚಿತ್ರದಲ್ಲಿ ನಟಿಸಿದ್ದ ಮಧು ಕೂಡಾ 'ತಲೈವಿ' ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲ ಮಧು 'ಸೀತಾರಾಮ ಕಲ್ಯಾಣ' ಚಿತ್ರದಲ್ಲಿ ಕೂಡಾ ನಟಿಸಿದ್ದರು. 'ತಲೈವಿ' ಚಿತ್ರದಲ್ಲಿ ಮಧು ಎಂಜಿಆರ್ ಪತ್ನಿ ಜಾನಕಿ ರಾಮಚಂದ್ರನ್ ಪಾತ್ರವನ್ನು ನಿಭಾಯಿಸಿದ್ದಾರೆ.
ಎ.ಎಲ್. ವಿಜಯ್ ನಿರ್ದೇಶನದ 'ತಲೈವಿ' ಚಿತ್ರವನ್ನು ವಿಷ್ಣುವರ್ಧನ ಇಂದುರಿ ಹಾಗೂ ಶೈಲೇಶ್ ಆರ್. ಸಿಂಗ್ ನಿರ್ಮಿಸಿದ್ದಾರೆ. ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಚಿತ್ರಕ್ಕೆ ಬಹಳ ಬೇಡಿಕೆ ಇದೆ. ಆದರೆ ನಿರ್ಮಾಪಕರು ಚಿತ್ರವನ್ನು ಥಿಯೇಟರ್ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.