ಪ್ರಮುಖವಾಗಿ, ಧ್ರುವ ಅಭಿನಯದ ಹೊಸ ಚಿತ್ರವನ್ನು ಉದಯ್ ಮೆಹ್ತಾ ಅವರೇ ನಿರ್ಮಿಸಿದರೆ, ಎ.ಪಿ. ಅರ್ಜುನ್ ನಿರ್ದೇಶನ ಮಾಡುತ್ತಿದ್ದಾರೆ. ಬುಧವಾರ ಬೆಳಗ್ಗೆ ಚಿತ್ರದ ಸ್ಕ್ರಿಪ್ಟ್ ಪೂಜೆ ಆಗಿದ್ದು, ಮುಂದಿನ ತಿಂಗಳು ಮುಹೂರ್ತ ನಡೆಯುವ ಸಾಧ್ಯತೆ ಇದೆ. ಬುಧವಾರ ಬೆಳಗ್ಗೆ ಕೆ.ಆರ್. ರಸ್ತೆಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಚಿತ್ರದ ಸ್ಕ್ರಿಪ್ಟ್ ಪೂಜೆ ಆಗಿದೆ.
ಸ್ಕ್ರಿಪ್ಟ್ ಪೂಜೆ ಸಂದರ್ಭದಲ್ಲಿ ಧ್ರುವ, ನಿರ್ದೇಶಕ ಅರ್ಜುನ್, ನಿರ್ಮಾಪಕ ಉದಯ್ ಮೆಹ್ತಾ, ಛಾಯಾಗ್ರಾಹಕ ಸತ್ಯ ಹೆಗ್ಡೆ, ಸಂಭಾಷಣೆಕಾರ ಪ್ರಶಾಂತ್ ರಾಜಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು. ಅಲ್ಲಿಗೆ ಇಷ್ಟು ಜನರಂತೂ ಚಿತ್ರದಲ್ಲಿ ಖಂಡಿತಾ ಇರುತ್ತಾರೆ ಎಂಬುದು ಖಾತ್ರಿಯಾಗಿದೆ. ಚಿತ್ರದ ಸಂಗೀತ ನಿರ್ದೇಶಕರ ಆಯ್ಕೆ ಆಗಬೇಕಿದೆ. ಇದಕ್ಕೂ ಮುನ್ನ ಅರ್ಜುನ್ ನಿರ್ದೇಶನದ ಚಿತ್ರಗಳಿಗೆ ವಿ. ಹರಿಕೃಷ್ಣ ಸಂಗೀತ ಸಂಯೋಜಿಸುತ್ತಿದ್ದರು. ಈ ಚಿತ್ರಕ್ಕೂ ಅವರೇ ಸಂಗೀತ ಸಂಯೋಜಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಅಂದಹಾಗೆ, ಇದು ಸ್ಕ್ರಿಪ್ಟ್ ಪೂಜೆ ಅಷ್ಟೇ. ಚಿತ್ರದ ಮುಹೂರ್ತ ಆಗಬೇಕಿದೆ. ಹೆಸರು ಬಹಿರಂಗವಾಗಬೇಕಿದೆ. ಚಿತ್ರದಲ್ಲಿ ಯಾರೆಲ್ಲ ನಟಿಸುತ್ತಾರೆ ಮತ್ತು ಯಾರೆಲ್ಲ ಕೆಲಸ ಮಾಡುತ್ತಾರೆ ಎಂಬುದು ಗೊತ್ತಾಗಬೇಕಿದೆ. ಇವೆಲ್ಲ ಆಗಬೇಕಿದ್ದರೆ, ಇನ್ನೊಂದಿಷ್ಟು ದಿನ ಕಾಯಬೇಕು. ಏಕೆಂದರೆ, ಚಿತ್ರದ ಮುಹೂರ್ತ ಮುಂದಿನ ತಿಂಗಳು ನಡೆಯಲಿದೆಯಂತೆ. ಅದಾದ ಮೇಲಷ್ಟೇ ಚಿತ್ರೀಕರಣ ಪ್ರಾರಂಭ. ಮುಹೂರ್ತದ ಹೊತ್ತಿಗೆ ಚಿತ್ರದ ಇನ್ನಷ್ಟು ವಿಷಯಗಳು ಬೆಳಕಿಗೆ ಬರುವ ಸಾಧ್ಯತೆ ಇದೆ.