ವಿಭಿನ್ನ ಡೈಲಾಗ್ ಹಾಗೂ ಹಾಸ್ಯಪ್ರಜ್ಞೆ ಮೂಲಕ ಸಿನಿಪ್ರಿಯರ ಮನಗೆದ್ದ ನಟ ಸತೀಶ್ ನೀನಾಸಂ. ಇವರು ರೆಬಲ್ ಸ್ಟಾರ್ ಅಂಬರೀಶ್ ಅವರ ದೊಡ್ಡ ಅಭಿಮಾನಿ. ತಮ್ಮ ಫೇಸ್ಬುಕ್ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಸತೀಶ್, ತಮ್ಮ ಸಿನಿಮಾ ಜರ್ನಿಯಲ್ಲಿ ಯಶಸ್ಸು ತಂದುಕೊಟ್ಟ ಸಿನಿಮಾಗಳ ಬಗ್ಗೆ ಹೇಳಿಕೊಂಡಿದ್ದಾರೆ.
2008 ರಲ್ಲಿ ಶಿವರಾಜ್ಕುಮಾರ್ ಅಭಿನಯದ 'ಮಾದೇಶ' ಚಿತ್ರದ ಮೂಲಕ ಸಿನಿಮಾ ಪಯಣ ಆರಂಭಿಸಿದ ಈ ಲೂಸಿಯಾ ಖ್ಯಾತಿಯ ಹೀರೋ, ಸ್ಯಾಂಡಲ್ವುಡ್ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಲೈಫು ಇಷ್ಟೇನೆ, ಮನಸಾರೆ, ಡ್ರಾಮಾ ಹಾಗೂ ಪಂಚರಂಗಿ ಸಿನಿಮಾಗಳ ಮೂಲಕ ಭರವಸೆ ಮೂಡಿಸಿದ ನಟ ಸತೀಶ್ ನೀನಾಸಂ. ತಾವು ಹೀರೋ ಆಗಿ ಅಭಿನಯಿಸಿದ ಎಲ್ಲಾ ಸಿನಿಮಾಗಳ ಫೋಟೋ ಫ್ರೇಮ್ ಹಾಕಿಸಿ ಆ ಚಿತ್ರಗಳಲ್ಲಿ ತಮ್ಮ ಪಾತ್ರ ಮತ್ತು ಗೆಟಪ್ ಬಗ್ಗೆ ವರ್ಣಿಸುವ ಮೂಲಕ ಆ ಸಿನಿಮಾ ವಿಶೇಷತೆಯನ್ನು ಸತೀಶ್ ಈ ವಿಡಿಯೋ ಮೂಲಕ ಹೇಳಿದ್ದಾರೆ.
ನಾನು ಇದುವರೆಗೂ ನಟಿಸಿರುವ ಚಿತ್ರಗಳಲ್ಲಿ 'ಲೂಸಿಯಾ' ಹಾಗೂ 'ಅಯೋಗ್ಯ' ಸೆಂಚುರಿ ಬಾರಿಸಿವೆ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಲೂಸಿಯಾ, ಡ್ರಾಮಾ, ದ್ಯಾವ್ರೇ, ಅಂಜದ ಗಂಡು, ಲವ್ ಇನ್ ಮಂಡ್ಯ, ರಾಕೆಟ್, ಚಂಬಲ್, ಬ್ಯೂಟಿಫುಲ್ ಮನಸುಗಳು, ಅಯೋಗ್ಯ, ಗೋದ್ರಾ, ಹೀಗೆ ತಾವು ನಟಿಸಿರುವ ಸಿನಿಮಾಗಳ ರೋಚಕ ಕ್ಷಣಗಳನ್ನು ಸತೀಶ್ ನೀನಾಸಂ ವಿವರಿಸಿದ್ದಾರೆ. ಜನರ ಪ್ರೀತಿಯನ್ನು ಗಳಿಸಿದ್ದೇನೆ. ಇದಕ್ಕಿಂತ ದೊಡ್ಡ ಆಸ್ತಿ ಇನ್ನೇನು ಬೇಕು ಎನ್ನುತ್ತಾರೆ ಸತೀಶ್.