ಬೆಂಗಳೂರು: ಮತ್ತೊಬ್ಬ ಮಹಿಳಾ ನಿರ್ದೇಶಕಿ ಕನ್ನಡ ಚಿತ್ರ ರಂಗಕ್ಕೆ ಆಗಮಿಸಿದ್ದಾರೆ. ಅವರೇ ನಿರ್ದೇಶಕಿ ಅರ್ನಾ ಸಾಧ್ಯ (ಮೂಲ ಹೆಸರು ಶ್ವೇತ ಶೆಟ್ಟಿ).
ಈ ಹಿಂದೆ ‘1098’ ಸೇವ್ ಚೈಲ್ಡ್ ಹುಡ್ ಎಂಬ ಸಿನಿಮಾ ನಿರ್ದೇಶನ ಮಾಡಿದವರು. ಈಗ ಹೆಸರಾಂತ ಲೇಖಕಿ ಸಾರಾ ಅಬುಬ್ಕರ್ ಅವರ ಕಾದಂಬರಿ ಆಧರಿಸಿದ ಚಿತ್ರಕ್ಕೆ ‘ಸಾರಾ ವಜ್ರ’ ಅಂತ ಸಹ ನಾಮಕರಣ ಮಾಡಿದ್ದಾರೆ. ಇದು ಬ್ಯಾರಿ ಸಮೂಹದ ಸುತ್ತ ನಡೆಯುವ ಕಥಾ ವಸ್ತು. ಕಡಲ ತೀರದಲ್ಲಿ ಹೆಚ್ಚಾಗಿ ಚಿತ್ರೀಕರಣ ಮಾಡಿದ್ದಾರೆ.
ಅನು ಪ್ರಭಾಕರ್, ರಮೇಶ್ ಭಟ್, ಸುಧಾ ಬೆಳವಾಡಿ, ರೆಹಮಾನ್, ಸುಹಾನ, ಪ್ರದೀಪ್ ಪೂಜಾರಿ, ವಿಭಾಸ್, ಅಂಕಿತ, ಸಾಯಿ ತೋಶಿತ್, ಆಯುಶ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಸಾರಾ ವಜ್ರ ಚಿತ್ರದ ಡಬ್ಬಿಂಗ್ ಮುಗಿದಿದೆ.
ಎಲ್ಲಾ ಕಲಾವಿದರು ‘ಸಾರಾ ವಜ್ರ’ದ ಪಾತ್ರಗಳಿಗೆ ಜೀವ ತುಂಬಿದ್ದಾರೆ ಎನ್ನುತ್ತಾರೆ ನಿರ್ದೇಶಕಿ ಅರ್ನಾ ಸಾಧ್ಯ. ಚಿತ್ರದಲ್ಲಿ ಏಳು ಹಾಡುಗಳಿಗೆ ವಿ.ಮನೋಹರ್ ಸಂಗೀತ ಹಾಗೂ ಹಿನ್ನೆಲೆ ಸಂಗೀತವಿದೆ. ಬಿ.ಎಂ.ಹನೀಫ್ ಹಾಗೂ ವಿ.ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯವಿದೆ. ಕೊರೊನಾ ಸಾಂಕ್ರಾಮಿಕ ಭೀತಿ ದೂರವಾಗುತ್ತಿದ್ದಂತೆ ಉಳಿದ ಕೆಲಸಗಳಲ್ಲಿ ತೊಡಗುತ್ತೇವೆ ಎನ್ನುತ್ತಾರೆ ನಿರ್ದೇಶಕರು. ನರೇಂದ್ರಬಾಬು ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಚಿತ್ರವನ್ನು ಸಂಭ್ರಮ ಡ್ರೀಂ ಹೌಸ್ ನ ಮೂಲಕ ದೇವೇಂದ್ರ ರೆಡ್ಡಿ ಅವರು ನಿರ್ಮಿಸುತ್ತಿದ್ದಾರೆ. ಪರಮೇಶ್ ಸಿ.ಎಂ ಛಾಯಾಗ್ರಹಣ, ವಿ.ಮನೋಹರ್ ಸಂಗೀತ ನಿರ್ದೇಶನ ಹಾಗೂ ಅಕ್ಷಯ್.ಪಿ ರಾವ್ ಅವರ ಸಂಕಲನ ಸಾರಾ ವಜ್ರ ಚಿತ್ರಕ್ಕಿದೆ.