ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಇಂದು 42ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಆದರೆ ಈ ಬಾರಿ ಕೊರೊನಾ ಇರುವುದರಿಂದ ಗಣೇಶ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಮನೆ ಬಳಿ ಅಭಿಮಾನಿಗಳು ಬರುವುದು ಬೇಡ ಎಂದು ಗಣೇಶ್ ಕೆಲವು ದಿನಗಳ ಮೊದಲೇ ಮನವಿ ಮಾಡಿದ್ದರು.
ನಮಸ್ಕಾರ, ನಮಸ್ಕಾರ, ನಮಸ್ಕಾರ ಎಂದು ಹೇಳುತ್ತಾ ಖಾಸಗಿ ಕಾರ್ಯಕ್ರಮವೊಂದರ ಮೂಲಕ ಫೇಮಸ್ ಆದ ಗಣೇಶ್ಗೆ ಬ್ರೇಕ್ ಸಿಕ್ಕಿದ್ದು 2006 ರಲ್ಲಿ ಬಿಡುಗಡೆಯಾದ ಯೋಗರಾಜ್ ಭಟ್ ನಿರ್ದೇಶನದ 'ಮುಂಗಾರು ಮಳೆ' ಚಿತ್ರದಿಂದ. ಅದಕ್ಕೂ ಮುನ್ನ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಸಿನಿಮಾ ಮೇಲಿನ ಆಸೆಯಿಂದ ಲಾರಿ ಹತ್ತಿ ಸಿಲಿಕಾನ್ ಸಿಟಿಗೆ ಬಂದು ಒಂದು ಪುಟ್ಟ ಬಾಡಿಗೆ ರೂಮ್ನಲ್ಲಿ ಗಣೇಶ್ ವಾಸವಿದ್ದರು.

ಆಗ ವರನಟ ಡಾ. ರಾಜ್ಕುಮಾರ್ ಅಪಹರಣವಾದ ಸಮಯ. ಆಗ ಚಿತ್ರರಂಗ, ಕಿರುತೆರೆಯ ಎಲ್ಲಾ ಚಟುವಟಿಕೆಗಳು ನಿಂತಿತ್ತು. ಗಣೇಶ್ ನಡೆಸಿಕೊಡುತ್ತಿದ್ದ ಒಂದು ಕಾರ್ಯಕ್ರಮಕ್ಕೂ ಕತ್ತರಿ ಬಿದ್ದಿತು. ಹೊಟ್ಟೆ ತುಂಬಿಸಿಕೊಳ್ಳಲು ಎಲ್ಲಿಂದಲೋ ಆಹಾರ ಸಾಮಗ್ರಿಗಳನ್ನು ತಂದು ಅಡುಗೆ ಮಾಡಿಕೊಳ್ಳುವುದೇ ಅವರಿಗೆ ದೊಡ್ಡ ಸಮಸ್ಯೆಯಾಗಿತ್ತು. ಈ ಲಾಕ್ಡೌನ್ನಲ್ಲಿ ಸಿನಿಕಾರ್ಮಿಕರು ಹೇಗೆ ಕಷ್ಟಪಟ್ಟಿದ್ದರೋ ಆಗ ಕೂಡಾ ಸುಮಾರು ದಿನಗಳ ಕಾಲ ಸಿನಿಕಾರ್ಮಿಕರು ಕೆಲಸ ಇಲ್ಲದೆ ಸಮಸ್ಯೆ ಎದುರಿಸಿದ್ದರು. ಆದರೆ ಆ ಸಮಯದಲ್ಲಿ ನಿರ್ಮಾಕರು ಹಾಗೂ ಫಿಲ್ಮ್ ಚೇಂಬರ್ ಸಿನಿಕಾರ್ಮಿಕರಿಗೆ ಅಗತ್ಯವಿರುವಷ್ಟು ದಿನಸಿ ಸಾಮಗ್ರಿಗಳನ್ನು ಒದಗಿಸಿದ್ದರು.

ಈಗಲೂ ಅದೇ ಪರಿಸ್ಥಿತಿ ಇದೆ. ಆದರೆ ಗಣೇಶ್ ಲಕ್ ಬದಲಾಗಿದೆ. ಅಂದು ಒಂದು ಚಿಕ್ಕ ರೂಮ್ನಲ್ಲಿ ವಾಸ. ಇಂದು ಕಷ್ಟಪಟ್ಟು ಸಾಧಿಸಿ ದೊಡ್ಡ ಮನೆಯಲ್ಲಿ ವಾಸವಿದ್ದಾರೆ. ಕೊರೊನಾ ಲಾಕ್ಡೌನ್ನಿಂದ ಕಷ್ಟಪಡುತ್ತಿರುವ ನೂರಾರು ಸಿನಿಕಾರ್ಮಿಕರಿಗೆ ಗಣೇಶ್ ಆಹಾರ ಸಾಮಗ್ರಿಗಳನ್ನು ಒದಗಿಸಿದ್ಧಾರೆ. ಗಣೇಶ್ ತಾವು ಹತ್ತಿ ಬಂದ ಏಣಿಯನ್ನು ಇಂದಿಗೂ ಮರೆತಿಲ್ಲ. ತಾವು ಅನುಭವಿಸಿದ ಕಷ್ಟವನ್ನು ಅವರು ಇಂದಿಗೂ ನೆನಪಿನಲ್ಲಿಡುತ್ತಾರೆ.
'ಬಲಗೈಲಿ ಕೊಟ್ಟದ್ದು ಎಡಗೈಗೆ ತಿಳಿಯಬಾರದು' ಎಂಬ ಮಾತಿದೆ. ಅದೇ ರೀತಿ ಗಣೇಶ್ ಕೂಡಾ ಈ ಲಾಕ್ಡೌನ್ ದಿನಗಳಲ್ಲಿ ಹಲವರಿಗೆ ಸಹಾಯ ಮಾಡಿದ್ಧಾರೆ. ಆದರೆ ಅದನ್ನು ಅವರು ಎಲ್ಲಿಯೂ ಹೇಳಿಕೊಂಡಿಲ್ಲ. ಗಣೇಶ್ ಅವರ ಕೆಲವು ಆಪ್ತರಿಂದ ಈ ವಿಚಾರ ಬೆಳಕಿಗೆ ಬಂದಿದೆ. ಗಣೇಶ್ ಕೇವಲ ಹೆಸರಿಗೆ ಮಾತ್ರ ಗೋಲ್ಡನ್ ಸ್ಟಾರ್ ಅಲ್ಲ, ಅವರ ಮನಸ್ಸು ನಿಜಕ್ಕೂ ಚಿನ್ನ ಎಂದು ಅವರಿಂದ ಸಹಾಯ ಪಡೆದವರು ಹೇಳುತ್ತಾರೆ.
ಗಣೇಶ್ ಅವರಿಗೆ ಜನ್ಮದಿನದ ಶುಭಾಶಯಗಳು. ಅವರ ಸಮಾಜ ಸೇವೆ, ಕಲಾಸೇವೆ ಮತ್ತಷ್ಟು ಮುಂದುವರೆಯಲಿ ಎಂಬುದು ನಮ್ಮ ಆಶಯ ಕೂಡಾ.