ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶಿಸಿರುವ 'ಸಲಗ' ಚಿತ್ರವು ಅಕ್ಟೋಬರ್ 14ರಂದು ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿತ್ತಾದರೂ, ಸೆನ್ಸಾರ್ ಆದ ಕಾರಣ ಅಧಿಕೃತ ಘೋಷಣೆ ಮಾತ್ರ ಹೊರಬೀಳಬೇಕಿತ್ತು. ಇದೀಗ ಸೆನ್ಸಾರ್ನವರು ಎ ಸರ್ಟಿಫಿಕೆಟ್ ಕೊಟ್ಟಿದ್ದಾರೆ. ಅಲ್ಲದೆ ಯಾವೊಂದೂ ದೃಶ್ಯಕ್ಕೂ ಕತ್ತರಿ ಬೀಳದಿರುವುದು ಚಿತ್ರತಂಡಕ್ಕೆ ಇನ್ನಷ್ಟು ಖುಷಿ ನೀಡಿದೆ. ಸೆನ್ಸಾರ್ ಪ್ರಮಾಣಪತ್ರ ಸಿಕ್ಕಿರುವುದರಿಂದ ಚಿತ್ರತಂಡವು ಅ. 14ಕ್ಕೆ ಬಿಡುಗಡೆಯಾಗುವುದು ಅಧಿಕೃತವಾಗಿದೆ.
ಭಾನುವಾರ ರಾತ್ರಿ 7ಕ್ಕೆ ಸಲಗ ಚಿತ್ರದ ಸೆನ್ಸಾರ್ ಪ್ರದರ್ಶನವನ್ನು ಮಲ್ಲೇಶ್ವರದ ಎಸ್.ಆರ್.ವಿ ಚಿತ್ರಮಂದಿರದಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ವಿಜಯ್, ಶ್ರೀಕಾಂತ್, ಧನಂಜಯ್ ಮುಂತಾದವರು ಆಗಮಿಸಿ, ಸೆನ್ಸಾರ್ನವರು ಏನು ತೀರ್ಪು ಕೊಡಬಹುದು ಎಂದು ಕುತೂಹಲದಿಂದ ಕಾದಿದ್ದರು. ಅಂತಿಮವಾಗಿ ರಾತ್ರಿ 10ರ ಸುಮಾರಿಗೆ ಸೆನ್ಸಾರ್ ಅಧಿಕಾರಿಗಳು ಚಿತ್ರಕ್ಕೆ ಯಾವುದೇ ಕಟ್ಗಳಿಲ್ಲದೆ ಎ ಪ್ರಮಾಣಪತ್ರ ನೀಡಿದ್ದಾರೆ.
'ಕೋಟಿಗೊಬ್ಬ 3' ಜೊತೆಗೆ ಕ್ಲಾಶ್:
ಸಲಗ ಚಿತ್ರವು ಇದುವರೆಗೂ ಎರಡು ಬಾರಿ ಮುಂದಕ್ಕೆ ಹೋಗಿದೆ. ಮೊದಲಿಗೆ ಇದೇ ವರ್ಷ ಮೇನಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಘೋಷಿಸಿತ್ತು. ಆದರೆ, ಕೊರೊನಾ ಎರಡನೆಯ ಅಲೆಯ ಲಾಕ್ಡೌನ್ನಿಂದಾಗಿ ಚಿತ್ರ ಬಿಡುಗಡೆ ಮಾಡುವ ಹಾಗಿರಲಿಲ್ಲ. ನಂತರ ಚಿತ್ರಪ್ರದರ್ಶನ ಪ್ರಾರಂಭವಾದ ಮೇಲೆ ವರಮಹಾಲಕ್ಷ್ಮೀ ಹಬ್ಬಕ್ಕೆ ಚಿತ್ರ ಬಿಡುಗಡೆಯಾಗುತ್ತದೆ ಎಂದು ಘೋಷಿಸಲಾಯಿತು. ಆದರೆ, ಸರ್ಕಾರದಿಂದ ಶೇ. 100ರಷ್ಟು ಹಾಜರಾತಿಗೆ ಅನುಮತಿ ನೀಡದ ಕಾರಣ, ಚಿತ್ರವನ್ನು ಮತ್ತೊಮ್ಮೆ ಮುಂದೂಡಲಾಯಿತು. ಈಗ ಅಂತಿಮವಾಗಿ ಚಿತ್ರವು ಅ.14ಕ್ಕೆ ದಸರಾ ಹಬ್ಬದ ಅಂಗವಾಗಿ ಬಿಡುಗಡೆಯಾಗುತ್ತಿದೆ. ಅಷ್ಟೇ ಅಲ್ಲ, ಸುದೀಪ್ ಅಭಿನಯದ 'ಕೋಟಿಗೊಬ್ಬ 3' ಚಿತ್ರದ ಜೊತೆಗೆ ಕ್ಲಾಶ್ ಆಗುತ್ತಿದೆ ಎನ್ನುವುದು ವಿಶೇಷ.
ವಿಜಯ್ಗೆ ಅದೃಷ್ಟ ಪರೀಕ್ಷೆ:
ಸಲಗ, ದುನಿಯಾ ವಿಜಯ್ ನಿರ್ದೇಶನದ ಮೊದಲ ಚಿತ್ರ. ಇಷ್ಟು ವರ್ಷ ಅಭಿನಯದಲ್ಲಿ ಗುರುತಿಸಿಕೊಂಡಿದ್ದ ವಿಜಯ್ ಈ ಚಿತ್ರದ ಮೂಲಕ ನಿರ್ದೇಶನದ ರುಚಿ ನೋಡಿದ್ದಾರೆ. ಮೂರು ವರ್ಷಗಳ ಹಿಂದೆ ಸಲಗ ಶುರು ಮಾಡಿದ ಮೇಲೆ ಅವರು ಯಾವೊಂದು ಚಿತ್ರವನ್ನೂ ಸಹ ಒಪ್ಪಿಕೊಂಡಿಲ್ಲ. ಈ ಮಧ್ಯೆ, ಇನ್ನೊಂದು ಚಿತ್ರವನ್ನು ಅವರು ನಿರ್ದೇಶಿಸುತ್ತಾರೆ ಎಂದು ಸುದ್ದಿಯಾಗಿತ್ತಾದರೂ, ಆ ಚಿತ್ರ ಸಹ ಕಾರಣಾಂತರಗಳಿಂದ ನಿಂತು ಹೋಯಿತು. ಈ ಚಿತ್ರ ವಿಜಯ್ಗೆ ಅದೃಷ್ಟ ಪರೀಕ್ಷೆಯಾಗಿದ್ದು, ಮುಂದಿನ ದಿನಗಳಲ್ಲಿ ಅವರು ನಟನೆಯಲ್ಲಿ ಮುಂದುವರೆಯುತ್ತಾರೋ ಅಥವಾ ನಿರ್ದೇಶನ ಮುಂದುವರೆಸುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.
ಚಿತ್ರದಲ್ಲಿ ವಿಜಯ್ ಜತೆಗೆ ಧನಂಜಯ್, ಸಂಜನಾ ಆನಂದ್, ಕಾಕ್ರೋಚ್ ಸುಧಿ ಮುಂತಾದವರು ನಟಿಸಿದ್ದು, ಚರಣ್ ರಾಜ್ ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ಟಿಣಿಂಗ ಮಿಣಿಂಗ ಟಿಶ್ಯಾ, ಸೂರಿಯಣ್ಣ ಮುಂತಾದ ಹಾಡುಗಳು ಜನಪ್ರಿಯವಾಗಿವೆ.
ಇದನ್ನೂ ಓದಿ: ನಿಸರ್ಗದ ನಡುವೆ ಸ್ನೇಹಿತರೊಂದಿಗೆ ಸಮಯ ಕಳೆಯುತ್ತಿರುವ ಜಾಹ್ನವಿ ಕಪೂರ್